ಶೃಂಗಾರವೀರ! ಕುಸುಮಶರ! ಬಾರೋ
ಸಂಸಾರಸಾರÀಸೌರಭವ ತಾರೋ
ಭಸ್ಮಾಂಗರಾಗನಾ ಧ್ಯಾನಧಾರಣದಲ್ಲಿ
ಹೇಮಾದ್ರಿತನುಜಳಾನನವ ತೋರೋ
ಆದ್ಯಂತಪರ್ಯಂತಸೃಷ್ಟ್ಟಿಘನಸೌಂದರ್ಯ-
ವೃಷ್ಟಿಧಾರೆಯಲಿ ತಾ ಮಾರ್ಜನವ ಗೈದು
ಭೂವ್ಯೋಮವಿಸ್ತಾರಶಿವಲಿಂಗ ತಾನಾಗಿ
ಜೀವಾತ್ಮಭಾವದಲಿ ಕುಣಿದು ಕುಣಿದು
ತಾನೆ ನಾಟಕವಾಡಿ ತಾನೆ ನೋಡುವÀನಾಗಿ
ತಾನನದಿ ತಂತಾನೆ ಲಯವಾಗುತಿರಲು
ಮೌನದೊಳು ವಾಗರ್ಥರಸವು ಗರ್ಭಿತವಾಗಿ
ಬಂಧವಿಲ್ಲದ ಪ್ರೇಮವಂಕುರಿಸುತಿರಲು
ಅಂಗವಿಲ್ಲದ ನಿನಗೆ ಅಂಗನೆಯ ಸಂಗವದು
ಹೇಗಾಯಿತೆಂದು ನಾ ಹೇಳಲೇನು?
ಮಾತುಗಳ ಸ್ಪರ್ಶಸುಖದಲ್ಲಿ ಮೌನವೇ
ರಸಕಾವ್ಯವಾದಂತೆ-ಅಲ್ಲವೇನು?
ಡಿ.ನಂಜುಂಡ
16/02/2016
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ