ಚಿತ್ತಭೂಮಿಯನುತ್ತು ವಾಗ್ಬೀಜವಂ ಬಿತ್ತಿ
ಬತ್ತದಾ ಬೆಳೆತೆಗೆವ ಬಾನ್ದನಿಯೆ ಬಾ
ಸುತ್ತಲೂ ನೀನೊತ್ತುವರಿದು ಹರಿದಾರರಲಿ
ಹತ್ತಾರು ತೆನೆಗಳಂ ಬಾಗಿಸುತ ಬಾ
ಇತ್ತ ಬಂದೆನ್ನೆತ್ತಿ ಹೊತ್ತೊಳಗೆ ಕೊಂಡೊಯ್ದು
ಎತ್ತರಕೆ ಹಾರಿಸುತಲೇರಿಸುತಲಾಡು
ನೆತ್ತಿಗೇರುತಲೆದ್ದು ಮತ್ತೇರಿ ಕುಣಿಯುತಿರೆ
ಬತ್ತದಾ ಸುಳಿಯೊಳಗೆ ಸಾವಿರದ ಹಾಡು
ಗೊತ್ತೆನೆಗೆ ನೀ ಬರುವೆ ಗೊತ್ತಿಲ್ಲದಂತೆನಗೆ
ಗೊತ್ತುಗಳನೆತ್ತೊಗೆದು ಗೊತ್ತೊಂದ ಬಗೆದು
"ಗೊತ್ತಿಲ್ಲ"ದಾ ಲೋಪಸಂಧಿಯೊಳ ಸ್ವರದಂತೆ
ಗೊತ್ತುಂಟು ಮಾಡು ನೀ ಸಂಧಿಗಳನೊಡೆದು
ಎತ್ತಲೋ ಮಾಯವಾದಾ ಮುತ್ತ ಮೂಗುತಿಯು
ಮತ್ತೆ ತಾನವತರಿಸಿ ಬಳಿಗೆ ಬಂದಂತೆ
ಕತ್ತಲೆಯ ಹೆಬ್ಬಸಿರ ಸೀಳೊಡೆದು ಹೊರಬಂದು
ಸುತ್ತಲೂ ಹೊಂಗಿರಣ ವಿಸ್ತರಿಸುವಂತೆ
ತುತ್ತೊಂದ ತಿನ್ನುತಿರೆ ನಾಲಗೆಯು ರುಚಿಯೊಡೆದು
ಮತ್ತೊಂದ ತಾನೆಣಿಸಿ ಜಿನುಗುತಿರುವಂತೆ
ಹೆತ್ತಮ್ಮ ಹಗುರಾಗಿ ಕಂದನನ್ನೆದೆಗವುಚಿ
ಮುತ್ತುಗಳ ಮಳೆಗರೆದು ಅಳುತಣಿಸುವಂತೆ
ಬೆತ್ತದೇಟಿನ ಬರೆಗೆ ಬರೆದ ಬರಹದ ಹಾಗೆ
ಸತ್ತರೂ ಸವೆಯದಾ ಸತ್ಯದಾ ಹಾಗೆ
ಬತ್ತನ್ನದೊಳ ಸತ್ತ್ವ ತಾನಲ್ಲಿಯೇ ಉಳಿವಂತೆ
ಚಿತ್ತೈಸಿ ನೀನೆನ್ನೊಳಗೊಳಗೆ ಸಾಗೆ
ಚಪ್ಪಾಳೆ... ಚಪ್ಪಾಳೆ...
ಪ್ರತ್ಯುತ್ತರಅಳಿಸಿಬೆತ್ತದೇಟಿನ ಬರೆಬಿದ್ದರೂ ಸಹಾ ವಾಗ್ಬೀಜ ಬಿತ್ತಿಸಿಕೊಂಡರು ಗುರು ಮುಖೇನ
ಜನ್ಮೇಪಿ ಬಂಜರಾದ ನನ್ನಂತಹ ಮನಸುಗಳಿಗೆ
ತೋರುವನೇ ಕರುಣೆ ಆ ವಿಧಾತ?