ಮಂಗಳವಾರ, ಮಾರ್ಚ್ 8, 2016

ಪಂಚಮಾತ್ರೆ

ನಿನ್ನೆ ದಿನ ಶಿವರಾತ್ರಿ ಮನೆಮಂದಿಯುಪವಾಸ
ಜಾಗರಣೆಯಿಂದಾಗಿ ಪುರುಸೊತ್ತು ಇಲ್ಲ
ಅನ್ನ ತಪ್ಪಲೆಯಿಲ್ಲ ತಿಳಿಸಾರುಕ್ಕಲಿಲ್ಲ
ಎಷ್ಟೊಂದು ಪಾತ್ರೆಗಳು ಏಕೆ ತೊಳೆದಿಲ್ಲ?

ತುಪ್ಪದಲಿ ಹುರಿದಂಥ ಘಮದ ಗೋಡಂಬಿಗಳು
ತುತ್ತೊಂದರಲ್ಲಿ ಹತ್ತತ್ತರಂತೆಣಿಸೆ
ತಿಂದ ಕೇಸರಿಬಾತು ಜಿಡ್ಡ ಜಿನುಗಿಸುತಿರಲು
ಗಂಟಲಲಿ ತಳವೂರಿ ತೇಗ ಗುಣಿಸೆ

ಹೊಟ್ಟೆಯಲ್ಲಡರಿದ್ದ ಗೊಜ್ಜೂಡಿದವಲಕ್ಕಿ
ಮೇಲಮೇಲಕೆ ಸಾಗಿ ಗಂಟಲನು ಒತ್ತಿ
ಹೆಸರುಪಾಯಸಗೂಡಿ ಹುದುಗಿದ್ದ ಜಿಡ್ಡನ್ನು
ಕಿತ್ತೊಗೆದು ಹೊರಹಾಕಿ ತಲೆಯ ಸುತ್ತಿ

ಕೆಳಗಿಳಿವ ಕ್ಷಣದಲ್ಲಿ ಮತ್ತೆ ಬೀಸಿತು ಗಾಳಿ
ಹೊಟ್ಟೆಯೊಳು ಹತ್ತಾರು ಸುತ್ತು ಹಾಕಿ
ಅರೆಯರೆದು ಅಳಿದುಳಿದ ಚರ್ಪುಗಳ ಜೊತೆಗೂಡಿ
ಬಾಯಿಂದ ಹೊರಹಾಕೆ ಉಳಿದಿಲ್ಲ ಬಾಕಿ


ಇಂತಿರಲು ತೊಳೆದದ್ದು ಹೊಟ್ಟೆಯೊಳಗಿನÀ ಪಾತ್ರೆ
ಹಾಗಾಗಿ ಬಚ್ಚಲಲಿ ಪಾತ್ರೆಗಳ ಜಾತ್ರೆ
ಶಿವರಾತ್ರಿಯುಪವಾಸ ಚರ್ಪುಗಳ ಸಹವಾಸ
ಈಗ ತಪ್ಪದೆ ತಿನ್ನಿ ಪಂಚಮಾತ್ರೆ

ಡಿ.ನಂಜುಂಡ
08/03/2016


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ