ಮಂಗಳವಾರ, ಜುಲೈ 5, 2016

ಗೊಂದಲ

ಯಾವ ಸೀರೆಯನುಡಲಿ? ಯಾವ ರವಿಕೆಯ ತೊಡಲಿ?
ತೊಟ್ಟುಡುಗೆಯನೆ ಮತ್ತೆ ಹೇಗೆ ತೊಡಲಿ?
ಹಸಿರುಡಲೆ? ಕೆಂಪುಡಲೆ? ಕಡಲೆ ಬಣ್ಣದನುಡಲೇ?
ತಿಳಿಯದಾಗಿದೆ ಹೇಳೆ? ಯಾವುದುಡಲಿ?

ಕೆಂಪು ಜರಿ ಸೀರೆಯುಡಬಹುದಾದರದನಂದು
ಸುಂದರಿಯ ಮದುವೆಮನೆಗುಟ್ಟಾಗಿದೆ
ಚಂದವಿದೆಯೆಂದ ಚಂದ್ರತ್ತೆಯೇ ನೋಡಿರಲು
ಉಟ್ಟಿದುದು ಎಲ್ಲೆಡೆಯೂ ರಟ್ಟಾಗಿದೆ

ಹಸಿರು ಸೆರಗಿನ ಮೆರುಗು ಚಂದಗಾಣಿಸಬಹುದು
ಅದಕೊಪ್ಪುವಾ ರವಿಕೆ ಬಿಗಿಯಾಗಿದೆ
ತಿಳಿನೀಲ ಸೀರೆಯದು ನನಗಿಷ್ಟವಾದರೂ
ಬಣ್ಣದಾ ಓಲೆ ತುಂಡಾಗಿದೆ

ತುಸು ತೆಳ್ಳಗಿದ್ದರೂ ಕಪ್ಪು ಸೀರೆಯಲಿ ನೀ
ಅಪ್ಸರೆಯ ಹಾಗೆಯೇ ಎಂದವರು ಅಂದು
ಬರುತಿಹರೆ ಮತ್ತಿಂದು ಎಂದು ತಿಳಿವುದು ಹೇಗೆ?
ಅದು ಬೇಡವೇ ಬೇಡ ಹೇಳೆ ಮತ್ತೊಂದು

ಡಿ.ನಂಜುಂಡ

05/07/2016

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ