ಮಂಗಳವಾರ, ಆಗಸ್ಟ್ 2, 2016

ಭಾರತಿಯೆ! ಬಾ

ಭಾರತಿಯೆ! ಬಾ ಮತಿಗೆ ಭಾವಗತಿಗೆ
ರಾಗರಂಜಿತಯೋಗಸಾಧನೆಗೆ
ಕಲ್ಪನಾರಾಹಿತ್ಯ ಪರಿಪೂರ್ಣಸಾಹಿತ್ಯ-
ದುತ್ಕೃಷ್ಟಲಾಲಿತ್ಯ ಪದಪುಷ್ಟಿಯೆ!
ಅಲ್ಪಜ್ಞನೀ ಭಾವಕಲ್ಪೋಕ್ತವರ್ಣದಿಂ-
ದುದ್ಭವಿಸಿ ಬಾ, ನಾದಸಂಸೃಷ್ಟಿಯೆ!
ಪ್ರಣವೋಚ್ಚಾರನಿರತದಣುರೇಣುತೃಣಗಳಲಿ
ಅನುರಣಿಪ ಆನಂದಸಂವೃಷ್ಟಿಯೆ!
ಭಾವಜ್ಞೆ! ನೀ ಭವ್ಯದಕ್ಷರಾವರ್ತನದ
ಝಂಕೃತಿಯಲವತರಿಸು ಸಂತುಷ್ಟಿಯೆ!
ಛಂದೋವಿಲಾಸಾದಿ ಪದಬಂಧಸಂಚಲಿತ
ವಾಗರ್ಥಸೌಂದರ್ಯಲಲಿತಾಂಗಿಯೆ!
ನಿಸ್ಸೀಮವಿಸ್ತಾರದೇಕಾರ್ಥಮಧುಪೂರ-
ಪದಗರ್ಭಧಾರಿಣಿಯೆ! ಗೀರ್ವಾಣಿಯೆ!
ಡಿ.ನಂಜುಂಡ
02/08/2016

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ