ನಲ್ಲೆಯು ಮನೆಯೊಳಗಿಲ್ಲದೆ ಹೋದರೆ
ಬೆಲ್ಲದ ಸವಿ ತಾನಳಿಯುವುದು
ಬಳೆಗಳ ಘಲ್ ಘಲ್ ನಾದವ ಕೇಳದೆ
ಪಲ್ಯವು ಕರಿಗಲ್ಲಾಗುವುದು
ನೆಲದಲಿ ಮಲಗಿಹ ಕಸಗಳು ಅಲ್ಲಿಯೆ
ಆಲಸದಲಿ ಮೈಮುರಿಯುವುವು
ಬದಲಿಸಿ ಮಗ್ಗುಲನಾ ಬದಿಗೀಬದಿ-
ಗೆದೆ ಬೆನ್ನಾಗಿಸಿ ಹೊರಳುವುವು
ತೊಳೆಯದ ಪಾತ್ರೆಗಳತ್ತಿತ್ತಲುಗದೆ
ಕಾಯಕ ಯೋಗವ ತೊರೆಯುವುವು
ಕೆಲಸವ ಮಾಡೆವು ನೀರನು ಮುಟ್ಟೆವು
ಎನ್ನುತ ಮುಷ್ಕರ ಮಾಡುವುವು
ಹಾಸಿದ ಹಾಸಿಗೆಯದೆ ಆಸನದಲಿ
ಮಿಸುಕಾಡದೆ ತಾ ಧ್ಯಾನಿಪುದು
ಹೊದಿಕೆಗಳೆಲ್ಲವನೆಸೆದೆಸೆದಲ್ಲಿಯೆ
ನಾಮರೂಪಗಳ ತ್ಯಜಿಸುವುದು
ನಲ್ಲನ ಮೊಗಹೂಗಿಡದಾ ಬುಡದಲಿ
ಕಳೆಗಳು ಸೊಂಪಲಿ ಬೆಳೆಯುವುವು
ತೋಟಿಗನಿಲ್ಲದ ಕೈದೋಟದ ಹಾಗೆ
ಮೊಗ್ಗುಗಳರಳದೆ ಉದುರುವುವು
ಡಿ.ನಂಜುಂಡ
20/08/2016
ನೆಮ್ಮದಿಯಿಲ್ಲವು ನಲ್ಲೆಯು ಇರದಿರೆ
ಪ್ರತ್ಯುತ್ತರಅಳಿಸಿಬಿಮ್ಮೆನುತಲಿದೆ ಖಾಲಿ ಮನೆ
ಸುಮ್ಮನೆ ಅವಳದೆ ನೆನಪಿನ ಹಾವಳಿ
ಚಿಮ್ಮದು ನಗೆಝರಿ ಮೊಗದಲ್ಲಿ....
ಓಹ್ ವಿಶ್ವ. ..ಧನ್ಯವಾದಗಳು
ಅಳಿಸಿ