ಶನಿವಾರ, ಆಗಸ್ಟ್ 26, 2017

ಗೋವ ಭಾವವ ತಾರೊ

ಗೋವ ಭಾವವ ತಾರೊ, ಗೋವಿಂದನೆ!
ಗೋಪಾಲನೆ! ಬಾ, ಗೋಕುಲಾನಂದನೆ!

ಚಣಚಣವು ನಾವುಲಿವ ವರ್ಣವರ್ಣದಲಿ
ನಿನ್ನಡಿಯ ಕಣಕಣಗಳಾವರಣವಿರಲಿ
ಅಲ್ಲಿ ಹಸುಗಳ ಕೊರಳ ಮರುಗುಣಿಗಳಿರಲಿ
ಕರ್ಣಮೋಹನಗಾನದನುರಣನವಿರಲಿ

ಎಲ್ಲಿ ನೋಡಿದರಲ್ಲಿ ಹಚ್ಚ ಹಸಿರಿರಲಿ
ಒಳನೋಟದಾಟಗಳು ಸ್ವಚ್ಛವಾಗಿರಲಿ
ಧನವು ತಾ ದನವು ಮೈತೀಡಿದಾ ಮಣ್ಣ-
ಗುಡ್ಡದೊಲು ಕರಗಿಯೂ ಕರಗದಂತಿರಲಿ

ಗೋಮಾತೆಯರು ನಿಲುವ ನೆಲನೆಲಗಳೊಲವು
ಹೊಲಹೊಲದ ತೆನೆಗಳಲಿ ಹಾಲಾಗಿ ಬಲವು
ಜಗದ ಜನರುದರಗಳಲುರಿಯ ತಣಿಸುತಲಿ
ಅಮೃತಧಾರೆಯ ಸ್ನೇಹವೆರೆಯುವಂತಿರಲಿ


ಡಿ.ನಂಜುಂಡ
26/08/2017



ಶುಕ್ರವಾರ, ಆಗಸ್ಟ್ 11, 2017

ಲೀಲೆಯಾಟವ ನೋಡಿರೊ

ಬಾನ ನೀಲದ ಬಾಲಕೃಷ್ಣನ
ಲೀಲೆಯಾಟವ ನೋಡಿರೊ
ಚೆಲುವನೆಲ್ಲವ ಚೆಲ್ಲುತಾಡುತ
ಕುಣಿವ ಬಗೆಯನು ಕಾಣಿರೊ
ಕಾನು ಮಲೆಗಳ ಸಾಲುಸಾಲಿನ
ಮಾಲೆ ಧರಿಸಿಹ ಮುರುಳಿಯ
ಹಕ್ಕಿಗಳ ಕೊರಳಾಗಿ ಕಲರವ-
ದೊಳಿಹ ರಾಗವಿರಾಗಿಯ
ರವಿಯ ಚರಣದ ರೂಪರಾಜಿಯ
ಜಗದ ಹರಹಲಿ ಹರಿಸಿದ
ಕವಿಯ ಭಾವದ ಬಿಂಬವಾಗುತ
ಹರಹನದರೊಳಗಿಳಿಸಿದ
ಕಡಲಿನಲೆಗಳ ಮೇಲೆ ತೇಲುವ
ನೊರೆಗಳಂದದಿ ಕಾಣುವ
ಒಡಲಿನಲೆಗಳನಿಳಿಸುತೆಬ್ಬಿಸಿ
ಸಮತೆಯೆಡೆಗವನೆಳೆಯುವ
ನಾವು ನೋಡುವ ನೋಟದಾಳದೊ
ಳಾಟವಾಡುವ ಬಾಲನ
ಮಾತು ಮಾತುಗಳರ್ಥವಾಗಿಹ
ಅಕ್ಷರಾಕ್ಷರಜೀವನ
ಡಿ.ನಂಜುಂಡ
11/08/2017

ಬುಧವಾರ, ಆಗಸ್ಟ್ 2, 2017

ಕುಡಿಕೆಗಳನೊಡೆಯುವನೆ?

ಮೊಸರ ಕುಡಿಕೆಗಳನೊಡೆವನೆ? ಕೃಷ್ಣ
ತಾ ಮುಸಿಮುಸಿ ನಕ್ಕೋಡುವನೆ?
ತಲೆಯೊಳ ಗಡಿಗೆಯ ಮೊಸರನು ಕಡೆದು
ತೇಲಿದ ಬೆಣ್ಣೆಯ ಮುದ್ದೆಯ ಪಿಡಿದು
ಬಾಲರ ಭಾವಗಳೆಲ್ಲವನುಸಿರೊಳ-
ಗೆಳೆಯುತಲೂದುತ ಕೊಳಲನು ಮಿಡಿದು
ಬೆರಳೊಳಗಾರೂ ಚಕ್ರಗಳೆತ್ತಿ
ಗರಗರ ತಿರುಗಿಸಿ ವಕ್ರೀಭವಿಸಿ
ಆರರಿಗಳ ಕಡೆಗೆಸೆಯಲು ಬರುವನೆ?
ನರರೊಳು ಸರಸರ ಸಂಚಲಿಸಿ
ಕುಡಿಕೆಗಳೆಲ್ಲವನೊಡೆದೊಡೆದಾಡುತ
ಅಡಿಯಿಂ ಮುಡಿತನಕೋಡಾಡಿ
ಕಡೆಗೋಲಿನ ಹಾಗತ್ತಿತ್ತಾಡುತ
ಗಡಿಗೆಯೊಳಿರುವುದ ಚೆಲ್ಲಾಡಿ
ಬಯಲೊಳಗಾಡುವ ಬುಗುರಿಯಾಟಕೆ
ಬಯಲೆಡೆಗೆಲ್ಲರನೆಳೆಯುವನೆ?
ಬಯಲಿನ ನಾದವನೆದೆಯೊಳು ಬೆಸೆಯಲು
ಮಾಯದ ಕುಡಿಕೆಗಳೊಡೆಯುವನೆ?
ಹರಿ ತಾನರಿಗಳ ಹರಿಯುವನೆ?
ಅರಿವಾಗೆಮ್ಮೊಳು ಹರಿಯುವನೆ?
ಡಿ.ನಂಜುಂಡ
02/08/2017

ಮಂಗಳವಾರ, ಆಗಸ್ಟ್ 1, 2017

ಅನುಭವಿಸದೆ ನಾನಭಿನಯಿಸೆನು

ಅನುಭವಿಸದೆ ನಾನಭಿನಯಿಸೆನು ನಿನ
ನಾಟಕರಂಗದ ಪಾತ್ರಗಳ
ಬಳಿದ ಬಣ್ಣಗಳನಳಿಸುವ ಬಗೆಗಳ
ನರಿಯದೆ ಹಾಡುವೆ ಹಾಡುಗಳ
ಕೃಷ್ಣಾ! ನಿನ್ನಯ ಲೀಲೆಗಳ
ಸೂತ್ರದೊಳರ್ಥದ ಹೊಳೆವುಗಳ

ಕಡೆಯಿಂದಲಿ ನೋಡಲು ಪಿತನು
ಕಡೆಯಿಂದಲಿ ನಾ ಮಗನು
ಅಭಿನಯವರಿಯದೆ ಸಂಭಾಷಣೆಗಳ
ಮರೆಯುತ ತೊದಲುತಲಾಡುವೆನು
ಹಣೆಯೊಳು ಬರೆದಿಹ ಪದಗಳನು
ಮಧುರಸವಿಲ್ಲದೆಯೋದುವೆನು

ಕೃಷ್ಣಾ! ಎಂದೊಡೆ ನಿನ್ನಾಕರ್ಷಣೆ
ಯಿಂದಲಿ ರಂಗವು ರಂಗಾಗೆ
ನನ್ನೆದೆಮಣ್ಣಿನ ಬಯಲಲಿ ನಿನ್ನಯ
ಕೊಳಲ ತರಂಗವು ಹಾಯಾಗೆ
ಅಭಿನಯವನುಭವವನುಭವಿಯಿಹಭವಿ
ಯೆಲ್ಲವು ನಿನ್ನೊಳಗೊಂದಾಗೆ

ನೋಡುವ ನೋಟದೊಳಾಡುವ ಆಟವ
ಹೂಡಿದ ಸೂತ್ರಕೆ ತಲೆಬಾಗಿ
ಕಾಡುವ ನೋವನು ಬಾಡುವ ಬಾಳನು
ಹಾಡುವ ಕೊರಳಿಗೆ ಶರಣಾಗಿ

ಇರುವೊಲು ಇಹಸಂಬಂಧವ ಬಂಧಿಸಿ
ಪೊರೆಯನು ಹರಿಯುತ ಪೊರೆಯುವೆಯ?
ಒಳಗಣ್ಣಿನ ತಿಳಿನೋಟದ ತಾಳಕೆ
ಕುಣಿಯುತ ತಕಧಿಮಿ ನುಡಿಸುವೆಯ?
ನಾದವ ಹೊಮ್ಮಿಸಿ ಹರಹುವೆಯ?
ಪಾದವ ತೋರಿಸಿ ಸಲಹುವೆಯ?

ಡಿ.ನಂಜುಂಡ
01/08/20177