ಮಂಗಳವಾರ, ಆಗಸ್ಟ್ 1, 2017

ಅನುಭವಿಸದೆ ನಾನಭಿನಯಿಸೆನು

ಅನುಭವಿಸದೆ ನಾನಭಿನಯಿಸೆನು ನಿನ
ನಾಟಕರಂಗದ ಪಾತ್ರಗಳ
ಬಳಿದ ಬಣ್ಣಗಳನಳಿಸುವ ಬಗೆಗಳ
ನರಿಯದೆ ಹಾಡುವೆ ಹಾಡುಗಳ
ಕೃಷ್ಣಾ! ನಿನ್ನಯ ಲೀಲೆಗಳ
ಸೂತ್ರದೊಳರ್ಥದ ಹೊಳೆವುಗಳ

ಕಡೆಯಿಂದಲಿ ನೋಡಲು ಪಿತನು
ಕಡೆಯಿಂದಲಿ ನಾ ಮಗನು
ಅಭಿನಯವರಿಯದೆ ಸಂಭಾಷಣೆಗಳ
ಮರೆಯುತ ತೊದಲುತಲಾಡುವೆನು
ಹಣೆಯೊಳು ಬರೆದಿಹ ಪದಗಳನು
ಮಧುರಸವಿಲ್ಲದೆಯೋದುವೆನು

ಕೃಷ್ಣಾ! ಎಂದೊಡೆ ನಿನ್ನಾಕರ್ಷಣೆ
ಯಿಂದಲಿ ರಂಗವು ರಂಗಾಗೆ
ನನ್ನೆದೆಮಣ್ಣಿನ ಬಯಲಲಿ ನಿನ್ನಯ
ಕೊಳಲ ತರಂಗವು ಹಾಯಾಗೆ
ಅಭಿನಯವನುಭವವನುಭವಿಯಿಹಭವಿ
ಯೆಲ್ಲವು ನಿನ್ನೊಳಗೊಂದಾಗೆ

ನೋಡುವ ನೋಟದೊಳಾಡುವ ಆಟವ
ಹೂಡಿದ ಸೂತ್ರಕೆ ತಲೆಬಾಗಿ
ಕಾಡುವ ನೋವನು ಬಾಡುವ ಬಾಳನು
ಹಾಡುವ ಕೊರಳಿಗೆ ಶರಣಾಗಿ

ಇರುವೊಲು ಇಹಸಂಬಂಧವ ಬಂಧಿಸಿ
ಪೊರೆಯನು ಹರಿಯುತ ಪೊರೆಯುವೆಯ?
ಒಳಗಣ್ಣಿನ ತಿಳಿನೋಟದ ತಾಳಕೆ
ಕುಣಿಯುತ ತಕಧಿಮಿ ನುಡಿಸುವೆಯ?
ನಾದವ ಹೊಮ್ಮಿಸಿ ಹರಹುವೆಯ?
ಪಾದವ ತೋರಿಸಿ ಸಲಹುವೆಯ?

ಡಿ.ನಂಜುಂಡ
01/08/20177


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ