ಗುರುವಾರ, ಡಿಸೆಂಬರ್ 28, 2017

ಪಲ್ಲವಿಸು ಹೇ ಪೃಕೃತಿ!

ಪಲ್ಲವಿಸು ಹೇ ಪೃಕೃತಿ! ಸೊಲ್ಲುಸೊಲ್ಲುಗಳಲ್ಲಿ
ಮೊಲ್ಲೆ ಬಳ್ಳಿಯು ಹರಹಿ ಹಬ್ಬುವಂತೆ
ಕಲ್ಲುಮುಳ್ಳುಗಳರ್ಥಸುಮಗಂಧದೊಳು ಬೆಸೆದು
ಚೆಲ್ಲಾಟವಾಡುತ್ತ ಕುಣಿಯುವಂತೆ

ಚಿತ್ತೈಸು ಹೇ ಪ್ರಕೃತಿ! ಚಿದ್ರೂಪತನುವಾಗಿ
ತತ್ತ್ವಾರ್ಥಭಾವದೊಳು ನಿತ್ಯವಾಗಿ
ಸತ್ಯಾತ್ಮದಾನಂದಪದಬಂಧರತಿಯಾಗಿ
ಮಿಥ್ಯಗೋಚರದಿಂದ ಮುಕ್ತವಾಗಿ

ಅಂತರಂಗದ ಮೌನ ತಾನನಂತದಿ ಬಾಗಿ
ಸಂತತವು ವಾಕ್ಕಾಯರೂಪವಾಗು
ಶಾಂತತೆಯ ಸೊಬಗಾಗುವಂತೆ ನೀನೆಲೆ ಪ್ರಕೃತಿ!
ಚಿಂತನೆಯ ಚಿತ್ರದೊಳ ಜೀವವಾಗು

ಡಿ.ನಂಜಂಡ
28/12/2017



ಭಾನುವಾರ, ಡಿಸೆಂಬರ್ 24, 2017

ಬಾನಲೂಡು ದೇವ

ಪ್ರಾಣಿದಯೆಯನೆದೆಯಲಿರಿಸಿ
ದಾನವಗುಣವಳಿಸು
ಕಾನನಕಲಕಂಠದೊಲವ-
ನಾನನದೊಳಗಿರಿಸು

ಬಾನಿನೆಲ್ಲೆ ತಿಳಿಯಲೋಡಿ
ತಾನನದೊಳಗಾಡೆ
ಗಾನಸೂತ್ರಮಾತ್ರದಿಂದ
ತಾನೆ ಬಾನಲೂಡೆ

ಮೌನದಾಳಕಿಳಿಸಿ ಪ್ರಕೃತಿ-
ಲೀನಗೊಳಿಸು ದೇವ
ಯಾನಪೂರ್ಣಸುಕೃತಿಯಲ್ಲಿ
ಕಾಣದಂತೆ ಭಾವ

ಡಿ.ನಂಜುಂಡ

24/12/2017

ಶನಿವಾರ, ಡಿಸೆಂಬರ್ 23, 2017

ಬೈರಾಗಿ

ತಂದಾನು ತಾನನವನಂದವಾಗಿ
ಬಂದಾನು ಬಾಂದಳದ ಬಂಧುವಾಗಿ

ಮೈಬೆವರ ಹನಿಯಿಳಿಸಿ ನೆಲದತ್ತ ಕೆಳ ಬಾಗಿ
ತನ್ನತನವನು ತೆನೆಗಳೊಳಗಿಳಿಸಿ ತೂಗಿ
ತಾನು ತಾನಲ್ಲವೆನೆ ಧೂಲಿಕಣದಂತಾಗಿ
ಮೇಲೆ ಸಾಗುವನು ಬಹಳ ಹಗುರಾಗಿ

ಹಣವನೆಣಿಸುವ ಸುಖದ ಸುಳಿಯೊಳಗೆ ಸುತ್ತುತಲಿ
ಮೇ¯ಕೇರದ ಹಾಗೆ ಶವಭಾರವಾಗಿ
ರೋಗಿಯಂತಾಗುತಿಹ ಬಹು ಬಲ್ಲಿದರಿಗಾಗಿ
ಮಣ್ಣಿನನುರಾಗಿ ತಾನೀಯುತಿಹ ರಾಗಿ

ಮಾತುಮಾತೊಳಗರ್ಥರಸವನಿರಿಸುವರಾಗಿ
ರಾಗವರಸುತÀ ಬರೆದ ಕವಿಗಳಂತಾಗಿ
ತಾನುಳಿಯದೇ ನೆಲವನುಳುವವನು ತಾನಾಗಿ
ಬಾನ ರಾಗದೊಳಿಹನು ನಮ್ಮ ಬೈರಾಗಿ

ಡಿ.ನಂಜುಂಡ
23/10/2017

ಶನಿವಾರ, ಡಿಸೆಂಬರ್ 16, 2017

ಕಚ್ಚು ಬಾ, ಸೊಳ್ಳೆ!

ಗೊಚ್ಚೆಯಿಂದೆದ್ದು ಬಾ, ಸೊಳ್ಳೆ ನೀ ಹಾಡುತ್ತ
ಕಚ್ಚು ನಾನೆಚ್ಚರದಲೇಳುವಾ ಹಾಗೆ
ಸ್ವಚ್ಛಗೊಳ್ಳುವೆನೆಂದು ಮೈಮನವ ತೊಳೆತೊಳೆದು
ರೊಚ್ಚುಗಳನಲ್ಲಲ್ಲಿ ನಿಲ್ಲಿಸದ ಹಾಗೆ
ಸ್ವಚ್ಛಭಾರತವೆಂಬ ಸಂಕಲ್ಪದರ್ಥವನು
ತಿಳಿವರೆಗೆ ಕೆಂಪಚ್ಚುಗಳ ನರಗಳಲ್ಲಿ
ಮೂಡಿಸುತ ಮೈಕೊಡವಿ ಮೇಲೆದ್ದು ಬರುವಂತೆ
ಗುಂಯಿಗುಡುತಲಿರು ನೀ ಮನೆಮನೆಗಳಲ್ಲಿ
ಸೂಕ್ಷ್ಮಾಣುಜೀವಿಗಳು ತಿನ್ನದಿಹ ವಸ್ತುಗಳ-
ನಲ್ಲಲ್ಲಿ ಒಗೆಯುತಿರೆ ನೀನಲ್ಲಿ ಹುಟ್ಟು
ಜಗಿಜಗಿದು ಕಂಡಲ್ಲಿ ಉಗಿದುಗಿದು ಕೆಂಪಾದ
ಗುರುತುಗಳ ತಂದು ನೀ ಮೈಮೇಲಕೊಟ್ಟು
ಪರಿಸರದ ಭಾಗದೊಲು ನಾನಿರುವ ಕಾಲವದು
ಬರುವವರೆಗೂ ನಿನ್ನ ಸಂತಾನವಿರಲಿ
ಎಲ್ಲ ನನಗಾಗೆಂಬ ಸ್ವಾರ್ಥದಾ ಸೋಗಿರಲು 
ನಿನ್ನಿರವು ಸರ್ವಾರ್ಥದರಿವಿಗಾಗಿರಲಿ
ಡಿ. ನಂಜುಂಡ
16/12/2017


ಮಂಗಳವಾರ, ಡಿಸೆಂಬರ್ 12, 2017

ವರವಾಗಿ ಬಂತೆ ಕಾಗೆ!?

ಕರಿಯುಂಡ ಕಾಗೆ ಕಾಯೆಂದು ಕೂಗೆ
ಹರಿವೊಂದು ಹರಿಯುತೆದೆಗೆ
ಹರ ತಾನು ಬಾಗುತರಿವೊಳಗೆ ಸರಿದು
ಗುರುವಾಗುತೆದ್ದ ಹಾಗೆ

ನರನರರÀ ನಂಜ ಮಾತುಗಳ ಹಿಂಜಿ
ಕರಿಯಾಗುತಿರಲು ರಾತ್ರಿ
ಸರಿಗೊಳಿಸಲದನು ಹಗಲೆಡೆಗೆ ತೂರಿ
ತಿರುತಿರುಗುತೇಳೆ ಧಾತ್ರಿ

ಒಳಗೆಲ್ಲ ತುಂಬಿ ತುಳುಕಾಡುತಿರುವ
ಕೊಳೆಗಳನು ಹೊರಕೆ ತೂರಿ
ಬೆಳಕೊಂದು ಬಂದು ಬೆಳಗಾಯಿತೆಂದು
ತಿಳಿಹೇಳಿದಂತೆ ಸೂರಿ

ಧರೆಯೆಸೆದ ಕರಿಯನರೆದರೆದು ಕುಡಿದು
ಗಿರಿಯತ್ತ ಹಾರಿ ಸಾಗೆ
ಅರಿವೊಳಗೆ ಕುಣಿವ ನಂಜುಂಡನಂತೆ
ವರವಾಗಿ ಬಂತೆ ಕಾಗೆ!?

ಡಿ.ನಂಜುಂಡ
12/12/2017