ಶುಕ್ರವಾರ, ಮೇ 23, 2014

ಬಾ ಕನಸೆ! ಕುಣಿದಾಡು!


ಬಾ ಕನಸೆ! ಕುಣಿದಾಡು ಬಣ್ಣದೋಕುಳಿಯಾಡು
ಹೃದಯನವರಂಗದಾ ಕಿರುತೆರೆಯ ಮೇಲೆ
ಅರೆತುಂಬಿ ತುಳುಕಾಡುತಿರುವ ಮತಿಯನು ತುಂಬು
ನಿದ್ರೆಯೊಳು ತೆರೆಯುತಲಿ ನನಗೊಂದು ಶಾಲೆ

ನೀನಾಡುವಾ ಆಟ ನನಗಾಗುತಿರೆ ಪಾಠ
ಭಾವಪೂರ್ಣತೆಯೊಳಗೆ ಹರಿಯುವೆನು ನಾನು
ಎಚ್ಚರದಿ ನಿಲುಕದಾ ಆಗಸವ ಮುಟ್ಟುವೆನು
ಅರಿವಿನಾಳಗಲಗಳನರಿತು ಚಲಿಸುವೆನು

ಆಸೆಗಳ ಕಡಲಿನಾ ತೀರದೊಳು ನಿಲಿಸೆನ್ನ
ಸುಖದುಃಖದಲೆಗಳಿಗೆ  ಸಾಕ್ಷಿಯಾ ಹಾಗೆ
ಕರುಣಿಸೆನ್ನಯ ಮನಕೆ ಒಳಗಣ್ಣ ನೋಟವನು
ನಿನ್ನಾಟದೃಶ್ಯಗಳ ನೋಡುವಾ ಹಾಗೆ

ಕರ್ಮಫಲಗಳ ತೊಟ್ಟು ಕಳಚಿ ಬೀಳಲಿ ಬೇಗ
ಓದಿನಾ ಫಲಿತಾಂಶವದು ಶೂನ್ಯವಾಗೆ
ಪೂರ್ಣತೆಯ ಪಾಠವನು ಕಲಿಸುತಲಿ ಕರಗೆನ್ನ

ನಿತ್ಯಮುಕ್ತಾನುಭವದಾನಂದದೊಳಗೆ.

ಡಿ.ನಂಜುಂಡ
23/05/2014

ಶುಕ್ರವಾರ, ಮೇ 16, 2014

ಓ ಮನವೆ! ಬಾ ಇಲ್ಲಿ

ವ್ಯೋಮದಲಿ ತೇಲುತಿಹ ಮನವೆ! ಬಾ ಇಲ್ಲಿ
ಭೂಮಿಯನು ಪ್ರೀತಿಸುತ ಬೆವರಮಳೆ ಸುರಿಸು
ಮಮಕಾರಸಾರವನು ಮಣ್ಣೊಳಗೆ ಹದಗೊಳಿಸು
ಸಮಚಿತ್ತವನು ಬಿತ್ತಿ ಸಹನೆಯನು ಬೆಳೆಸು

ಅತಿಯಾದ ಆಸೆಯಲಿ ಅಲೆಯದಿರು ಆಗಸದಿ
ಮಿತಗೊಳಿಸಿ ವೇಗವನು ಸನಿಹದಲಿ ನೆಲೆಸು
ಮತಿಯು ಮಥಿಸಿದ ಮಾತ ಪಥದಲ್ಲಿ ನೀ ಚಲಿಸು
ನತವಾಗಿ ಗಮನವನು ಋತದೊಳಗೆ ಇರಿಸು

ಛಂದಶ್ಶರೀರಗಳ ಅನುಬಂಧದೊಳ ಹೊಕ್ಕು
ಸೌಂದರ್ಯಸಮಹಿತದ ರಸದಿ ಸಂಭವಿಸು
ಚಂದಿರನ ಕಾಂತಿಯನು ತನುಮಂದಿರದಲಿಳಿಸು
ಮಂದಹಾಸವನಿರಿಸಿ ಮೊಗವ ಸಿಂಗರಿಸು

ಮದಭಾರಮೋಹಗಳ ಭಾವದೊಳು ತೂರಿಬಿಡು
ಪದಮಹಾಪೂರದಲಿ ಶುಚಿಯಾಗಿ ಬರಲಿ
ಸದಭಿರುಚಿಕಣವೊಂದು ಮಧುವಾಗಿ ಮಾರ್ಪಡಲಿ
ಹೃದಯಕುಸುಮದ ಹನಿಗೆ ಸೆಲೆಯಾಗಿ ನಿಲಲಿ

ಡಿ.ನಂಜುಂಡ
16/05/2014


ಸೋಮವಾರ, ಮೇ 12, 2014

ಮಳೆಯಾರ್ಭಟ!

ಮಲೆನಾಡಿನ ವಿಸ್ತಾರದ ಹಸಿರಿನ
ಬನಸೆರಗಿನ ಗಿರಿಹರಹಿನಲಿ
ಮಳೆಯಾರ್ಭಟದಾ ತಾಂಡವನಟನೆಯ
ನೋಡಿರಿ ಕುಣಿಯುತಲಾಡುತಲಿ

ಪಡುವಣ ದಿಶೆಯೆಡೆ ಕಣ್ಣೋಡೆ
ಓಡುತಲಿಹ ಮೋಡವ ನೋಡೆ
ನಡುಹಗಲಲೆ ನಟ್ಟಿರುಳಾವರಿಸಿದೆ
ಕೋಲ್ಮಿಂಚಿನ ಬೆಳಕೆರೆಯುತಿದೆ

ಜಲಧಾರೆಯು ಭೋರ್ಗರೆದಿದೆ, ನೊರೆನೊರೆ
ಯುರುಳಿವೆ ಕರಿಗಲ್ಲಿನ ಮೇಲೆ
ಕೆಳಗುರುಳಿಹ ಮರದಿಮ್ಮಿಗಳೆಲ್ಲವು
ಕೆನ್ನೀರಿನ ಹೊಳೆ ಮೇಲ್ತೇಲೆ

ಮುಳುಗತಲೇಳುತಲೀಜುತಿವೆ
ಅಣೆಕಟ್ಟೊಳು ತಲೆಯೆತ್ತುತಿವೆ
ಕಡಗೋಲಲಿ ಕಡೆದಂತಾಗುತಿದೆ
ಮಣ್ಣಿನ ಕಣಗಳು ಕುಣಿಯುತಿವೆ

ಹೊಳೆಯಿಕ್ಕೆಡೆಗಳ ಗದ್ದೆಯ ತಳದಲಿ
ಮಣ್ಣಿನ ಬೆಣ್ಣೆಯದಂಟುತಿದೆ
ಬತ್ತದ ಸಸಿಗಳು ನೆಲದಲಿ ಮಲಗಿವೆ
ಜಲದೇವಿಗೆ ಶರಣಾಗುತಿವೆ

ರಸ್ತೆಗಳೆಲ್ಲವು ಹಳ್ಳಗಳಾಗಿವೆ
ಕೆರೆಗಳ ದಂಡೆಗಳೊಡೆಯುತಿವೆ
ತೀರವ ಕಾಣದ ಕಡಲಂತಾಗಿವೆ
ಮೇರೆಗಳೆಲ್ಲವು ಮುರಿಯುತಿವೆ

ಭಾವಾವೇಶದಿ ಮಳೆಸುರಿಯುತಿದೆ
ಛಂದಃಪ್ರಾಸವ ಮೀರುತಿದೆ
ನಾಕವ ಬಿಟ್ಟು ನೆಲಕ್ಕೆ ಜಿಗಿದಿಹ
ಮದನಾರಿಯ ಹಾಗೆ ತೋರುತಿದೆ.

ಡಿ.ನಂಜುಂಡ
12/05/2014




ಸೋಮವಾರ, ಮೇ 5, 2014

ಹೃದಯಪುಷ್ಪವರಳಲಿ

ಅರಳಲೀ ಅರಳಲೀ
ಹೃದಯಪುಷ್ಪವರಳಲಿ

ಮನವು ದುಂಬಿಯಂತೆ ಮುತ್ತಿ
ಝೇಂಕಾರವ ಗೈಯಲಿ
ಪ್ರೇಮರೇಣುಪರಾಗಕ್ಕೆ
ಜಗವನೆಲ್ಲ ಸುತ್ತಲಿ

ಹಳತುಗಳನು ಕಳಚಲಿ
ಹೊಸಹರುಷದಿ ಮೆರೆಯಲಿ
ಅಂತರಂಗಚೈತ್ರವನವು
ಪಸುರುಡೆಯನು ಧರಿಸಲಿ

ಕುಸುಮಪಾತ್ರೆಯೊಳಗೆ ಜೇನು
ತುಂಬಿ ತುಂಬಿ ತುಳುಕಲಿ
ಕಣಕಣದಲಿ ಉಲ್ಲಾಸವು
ಕುಣಿಯುತ ಸಂಚರಿಸಲಿ

ಓಂಕಾರವು ಮೊಳೆಯಲಿ
ಸಂಸ್ಕಾರವು ಚಿಗುರಲಿ
ಪಂಚಕರಣತರುಗಳೆಲ್ಲ
ಫಲಭಾರದಿ ಬಾಗಲಿ

ಸಕಲಫಲದ ನೈವೇದ್ಯಕೆ
ಮಮಕಾರವು ಅಡಗಲಿ
ಶಶಿವಿಕಾಸಮಂದಹಾಸ-
ಸೌಂದರ್ಯವು ಮೂಡಲಿ 

ಜ್ಞಾನರವಿಯು ಬೆಳಗಲಿ
ಅಂಧಕಾರವಳಿಯಲಿ
ವಿಮಲಚಿತ್ತಜಲಧಾರೆಗೆ
ಜೀವಶಿವನು ನೆನೆಯಲಿ

ಡಿ.ನಂಜುಂಡ
06/05/2014


ಶನಿವಾರ, ಮೇ 3, 2014

ನಾನು ಹಾರುವ ಹಕ್ಕಿ!

ನಾನು ಹಾರುವ ಹಕ್ಕಿ ಬಾನೊಳಗೆ ತೂರುವೆನು
ನನ್ನದೆಂಬುವ ಭಾವ-ಗಳನೆಲ್ಲ ಕಳಚಿ
ನನ್ನೊಡಲ ಕುಡಿಯೊಂದು ಮೂಡುವಾ ಹೊತ್ತಿನಲಿ
ನಿನ್ನ ಮನೆಹಿತ್ತಲಿಗೆ ಬರುವೆ ಮೈಚಾಚಿ

ನೀನುಂಡ ಹಣ್ಣುಗಳ ಬೀಜಗಳನೂರಿಬಿಡು
ನಿನ್ನ ಕೈದೋಟದಲಿ ಬೆಳೆಸೊಂದು ಗಿಡವ
ನಾನಲ್ಲಿ ಗೂಡೊಂದ ಕಟ್ಟಿ ಮೊಟ್ಟೆಗಳಿಟ್ಟು
ತನುಮನದ ಕಾವ್ಕೊಟ್ಟು ಮೆರೆವೆ ತಾಯ್ತನವ

ಒಂದೆರಡು ಹಣ್ಣುಗಳ ಕೊಕ್ಕಿನಲಿ ನಾ ಕುಕ್ಕಿ
ತಂದು ಮರಿಗಳಿಗಿತ್ತು ಬೆಳೆಸುವೆನು ಬೇಗ
ಹಿಂದೆ ಮುಂದಕೆ ನೆಗೆದು ನಲಿಯುತಿರೆ ನನ್ನೊಲವು
ಬಂದ ದಾರಿಯ ಹಿಡಿದು ತೆರಳುವೆನು ಆಗ

ಹಿತ್ತಲಿನ ಹಣ್ಣುಗಳ ಹಕ್ಕಿಗಳು ತಿಂದುಗುಳಿ
ಬಿತ್ತುತಿರೆ ಬೀಜಗಳ ಹರಡುವುದು ಹಸಿರು
ಸುತ್ತಮುತ್ತಣ ಬನದ ಚೆಲುವು ಚಿಗುರತಲಿರಲು
ಮತ್ತೆ ಹರಿವುದು ಎನ್ನ ಬಸಿರಿನಲಿ ಉಸಿರು

ಗಿಡವನೊಂದನು ನೆಟ್ಟು ನೀರೆರೆದು ಪೋಷಿಸುತ
ಸಡಗರದ ಬದುಕನ್ನು ಬಾಳುತಿರೆ ನೀನು
ಕುಡಿಯೊಡೆದು ಫಲವಿಡಲು ಹರಡುವೆನು ಎಲ್ಲೆಲ್ಲೂ
ಕಾಡ ಸೊಬಗಿನ ನಡೆಗೆ ನಲಿಯುವೆನು ನಾನು

ಹಾರೋಣ ಬಾ ಗೆಳೆಯ! ಅರಿವಿನಾಗಸದಲ್ಲಿ 
ತೂರೋಣ ಆಸೆಗಳ ಕನಸ ಕಳೆಯುತಲಿ
ಮರೆಯೋಣ ಭಾರಗಳ ಹರಡೋಣ ಹಗುರಗಳ
ಸೇರೋಣ ಜಗದಿರವ ನಲಿವನುತ್ತುತಲಿ

ಡಿ.ನಂಜುಂಡ
03/05/2014