ಸೋಮವಾರ, ಜೂನ್ 29, 2015

ಹಲಸಿನ ಸಂತೆ

ಯೋಗದ ಕಠಿಣತೆಯೊಗ್ಗದು ಮನಸಿಗೆ
ಬಗ್ಗದು, ಬಳುಕದು ಕೈಕಾಲು
ಹೋಗುವ ಬನ್ನಿರಿ ಹಲಸಿನ ಸಂತೆಗೆ
ಭೋಗದ ಅರಮನೆಗಡಿಯಿಡಲು

ಬಿಸಿಬಿಸಿ ಹಲಸಿನ ದೋಸೆಗಳು
ಹಿಸಿದಿಹ ಬಿಡಿಬಿಡಿ ಹಣ್ಣುಗಳು
ಎಳೆಯರ ಗಮನವ ಕೂಡಲೆ ಸೆಳೆಯುವ
ಎಳೆದೊಳೆಗಳ ಮಂಚೂರಿಗಳು

ಕುದಿಯುವ ಎಣ್ಣೆಯ ಆಳಕೆ ಇಳಿದು
ಬಾಣಲೆಯುದ್ದಗಲಕೆ ಹರಿದು
ತೇಲಾಡುತಲಿವೆ ರುಚಿ ಮೂಳಕಗಳು
ಸುಂದರ ಸಂಜೆಯ ಕೆಂದೆಳೆದು 

ಮೆಲ್ಲಿರಿ ಹಲಸಿನ ಹಣ್ಣಿನ ಬಗೆಗಳ
ರುಚಿಕರ ಹಪ್ಪಳ ಚಿಪ್ಸುಗಳ
ಮರೆಯಿರಿ ಮೈಕೈ ನೋವುಗಳ
ಸವಿಯುತ ಬಿಸಿಬಿಸಿ ಖೀರುಗಳ

ಕೊಬ್ಬಿದ ದೇಹವನುಬ್ಬಿಸಿ ನಡೆಯಿರಿ
ಹಲಸಿನ ಹಬ್ಬದ ಲಘುಬಗೆಗೆ
ರುಚಿಗಳನೆಲ್ಲಾ ದಬ್ಬಲು ಉದರಕೆ
ನುಗ್ಗಿರಿ ಒಮ್ಮೆಲೆ ಪ್ರಾಂಗಣಕೆ.

ಡಿ.ನಂಜುಂಡ
29/06/2015



ಶನಿವಾರ, ಜೂನ್ 20, 2015

ಯೋಗ

ಸಂಸಾರಸುಖಭೋಗಸಂತ್ರಸ್ತ್ರ ಎಲೆ ಮನವೆ!
ದುಸ್ಸಂಗದಿಂದೆದ್ದ ದುಃಖಗಳ ತ್ಯಜಿಸು
ವೈರಾಗ್ಯಸಂಸಿದ್ಧಯೋಗದಲಿ ನೀ ಪಳಗು
ಸೃಷ್ಟ್ಯಾದಿಬಂಧವನು ನಿತ್ಯವೂ ಭಜಿಸು

ಅದು ಬೇಕು ಇದು ಬೇಕು ಎಂಬುದುನು ಬದಿಗೊತ್ತಿ
ಬದುಕಿನಲಿ ಬಂದುದನು ಮೊದಲು ಸ್ವೀಕರಿಸು
ಸಾಕೆಂಬ ತತ್ತ್ವವಿರೆ ಸಾಕಾರಕಿಲ್ಲ ಬೆಲೆ
ನಿರಾಕಾರ ನಿರ್ವಚನ ಪದತಲವ ಸ್ತುತಿಸು

ಆತಂಕ, ಆವೇಶ, ಉದ್ವೇಗದುದ್ಘೋಷಗಳು ಬೇಡ
ಅವು ನಿನ್ನ ಪ್ರಾಣದಾ ಆಯಾಮವಲ್ಲ
ಉಚ್ಛ್ವಾಸ ನಿಃಶ್ವಾಸಗಳ ಲಲಿತಕಲೆಯೊಂದ
ಬದುಕಿನಲಿ ನೀ ಕಲಿಯೆ ಆನಂದವೆಲ್ಲ

ಯೋಗವೇ ಮಾನವನ ಜೀವನದ ಸಾಧನವು
ಭೋಗವದು ರೋಗಗಳ ಮೂಲಕಾರಣವು
ರಾಗದ್ವೇಷದ ಕಿಡಿಗೆ ಬಲಿಯಾಗದೇ ಬದುಕಿ
ಆಗು ನೀನನುಭವದಿ ಬಾನ ಅರಿವು.
ಡಿ.ನಂಜುಂಡ

20/06/2015

ಗುರುವಾರ, ಜೂನ್ 18, 2015

ಕೊಳ್ಳುಬಾಕ

ಕೊಂಡವಸ್ತುಗಳೆಲ್ಲ ಸ್ಥಳಪೂರ್ತಿ ಆಕ್ರಮಿಸಿ
ನಿಲ್ಲಲೂ ನೆಲೆಯಿಲ್ಲ ಮನೆಗಳೊಳಗೆ
ಆದರೂ ನಿಲ್ಲದದು ಕೊಳ್ಳುವಿಕೆಯಾರ್ಭಟವು
ತೃಪ್ತಿಯೊಂದಿನಿತಿಲ್ಲ ಮನಗಳೊಳಗೆ

ಬಂದಿಹುದು ಇಂದಲ್ಲಿ ವಿಧವಿಧದ ವಸ್ತುಗಳು
ಮನದಣಿಯೆ ನೋಡೋಣ ಎಂದುಕೊಂಡು
ಅಂಗಡಿಗೆ ಹೋದೊಡನೆ ದೋಚಿದಂತೆಯೆ ಬಾಚಿ
ಮನೆಗೆ ತಂದಿಹ ನೋಡಿ ಕೊಂಡುಕೊಂಡು

ಕೊಳ್ಳುವಾಸೆಯು ನುಸುಳಿ ಮನದಗಲ ಕುಣಿದಾಡೆ
ಕೊಂಡು ತರುತಿಹ ದಿನವೂ ಒಂದೊಂದು ಸರಕ
ಒಂದರಾ ಮೇಲೊಂದು ಇಟ್ಟರೂ ಸಾಲದಿಹ
ಸರಕುಗಳೇ ತುಂಬಿರುವ ಮನೆಯೊಂದು ನರಕ

ಡಿ.ನಂಜುಂಡ
18/06/2015

ಬುಧವಾರ, ಜೂನ್ 17, 2015

ಶರಣಮಹಂ

ಶರಣಮಹಂ ಶರಣಮಹಂ ಸರ್ವಮಂಗಳಾಂಗನೇ
ಪಂಚಕರಣಪೂರ್ವಶರಣಮಹಂ ಸುಂದರಾನನೇ

ಸರ್ವರೂಪವರ್ಣಮಯಪ್ರಕೃತಿಕಾರ್ಯಕಾರಣಿ
ನಿತ್ಯಹರಿದ್ವರ್ಣವಿಪಿನಪುಷ್ಪಗಂಧಧಾರಿಣಿ

ಅನ್ನಸತ್ವಪೂರ್ಣಪೃಥ್ವಿಗರ್ಭಬಿಂದುಪಾಲಿನಿ
ನೀಲಮೇಘಭಾರವಾಹಪವನಚಿತ್ತಚಾಲಿನಿ

ಬಾಲಸೂರ್ಯಕಿರಣಪೂರ ಹಿಮಮಣಿಗಣಮಾಲಿನಿ
ಸುಂದರೇಂದುಹಾಸಬಂಧಪರ್ವತಾಗ್ರಚಾರಿಣಿ

ಕಾಕಕೋಕಿಲಾದಿ ನಿಖಿಲ ಖೇಚರಾತ್ಮರೂಪಿಣಿ
ಅಖಿಲವಿಶ್ವವ್ಯಾಪಿನಿ ಸಕಲದುಃಖನಾಶಿನಿ
ಜನನಮರಣಜರೇತ್ಯಾದಿ ಸರ್ವಭಯಾಪಹಾರಿಣಿ

ಡಿ.ನಂಜುಂಡ

17/06/2015