ಸಂಸಾರಸುಖಭೋಗಸಂತ್ರಸ್ತ್ರ ಎಲೆ ಮನವೆ!
ದುಸ್ಸಂಗದಿಂದೆದ್ದ ದುಃಖಗಳ ತ್ಯಜಿಸು
ವೈರಾಗ್ಯಸಂಸಿದ್ಧಯೋಗದಲಿ ನೀ ಪಳಗು
ಸೃಷ್ಟ್ಯಾದಿಬಂಧವನು ನಿತ್ಯವೂ ಭಜಿಸು
ಅದು ಬೇಕು ಇದು ಬೇಕು ಎಂಬುದುನು ಬದಿಗೊತ್ತಿ
ಬದುಕಿನಲಿ ಬಂದುದನು ಮೊದಲು ಸ್ವೀಕರಿಸು
ಸಾಕೆಂಬ ತತ್ತ್ವವಿರೆ ಸಾಕಾರಕಿಲ್ಲ ಬೆಲೆ
ನಿರಾಕಾರ ನಿರ್ವಚನ ಪದತಲವ ಸ್ತುತಿಸು
ಆತಂಕ, ಆವೇಶ, ಉದ್ವೇಗದುದ್ಘೋಷಗಳು ಬೇಡ
ಅವು ನಿನ್ನ ಪ್ರಾಣದಾ ಆಯಾಮವಲ್ಲ
ಉಚ್ಛ್ವಾಸ ನಿಃಶ್ವಾಸಗಳ ಲಲಿತಕಲೆಯೊಂದ
ಬದುಕಿನಲಿ ನೀ ಕಲಿಯೆ ಆನಂದವೆಲ್ಲ
ಯೋಗವೇ ಮಾನವನ ಜೀವನದ ಸಾಧನವು
ಭೋಗವದು ರೋಗಗಳ ಮೂಲಕಾರಣವು
ರಾಗದ್ವೇಷದ ಕಿಡಿಗೆ ಬಲಿಯಾಗದೇ ಬದುಕಿ
ಆಗು ನೀನನುಭವದಿ ಆ ಬಾನ ಅರಿವು.
ಡಿ.ನಂಜುಂಡ
20/06/2015
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ