ಸೋಮವಾರ, ಜೂನ್ 29, 2015

ಹಲಸಿನ ಸಂತೆ

ಯೋಗದ ಕಠಿಣತೆಯೊಗ್ಗದು ಮನಸಿಗೆ
ಬಗ್ಗದು, ಬಳುಕದು ಕೈಕಾಲು
ಹೋಗುವ ಬನ್ನಿರಿ ಹಲಸಿನ ಸಂತೆಗೆ
ಭೋಗದ ಅರಮನೆಗಡಿಯಿಡಲು

ಬಿಸಿಬಿಸಿ ಹಲಸಿನ ದೋಸೆಗಳು
ಹಿಸಿದಿಹ ಬಿಡಿಬಿಡಿ ಹಣ್ಣುಗಳು
ಎಳೆಯರ ಗಮನವ ಕೂಡಲೆ ಸೆಳೆಯುವ
ಎಳೆದೊಳೆಗಳ ಮಂಚೂರಿಗಳು

ಕುದಿಯುವ ಎಣ್ಣೆಯ ಆಳಕೆ ಇಳಿದು
ಬಾಣಲೆಯುದ್ದಗಲಕೆ ಹರಿದು
ತೇಲಾಡುತಲಿವೆ ರುಚಿ ಮೂಳಕಗಳು
ಸುಂದರ ಸಂಜೆಯ ಕೆಂದೆಳೆದು 

ಮೆಲ್ಲಿರಿ ಹಲಸಿನ ಹಣ್ಣಿನ ಬಗೆಗಳ
ರುಚಿಕರ ಹಪ್ಪಳ ಚಿಪ್ಸುಗಳ
ಮರೆಯಿರಿ ಮೈಕೈ ನೋವುಗಳ
ಸವಿಯುತ ಬಿಸಿಬಿಸಿ ಖೀರುಗಳ

ಕೊಬ್ಬಿದ ದೇಹವನುಬ್ಬಿಸಿ ನಡೆಯಿರಿ
ಹಲಸಿನ ಹಬ್ಬದ ಲಘುಬಗೆಗೆ
ರುಚಿಗಳನೆಲ್ಲಾ ದಬ್ಬಲು ಉದರಕೆ
ನುಗ್ಗಿರಿ ಒಮ್ಮೆಲೆ ಪ್ರಾಂಗಣಕೆ.

ಡಿ.ನಂಜುಂಡ
29/06/2015ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ