ಭಾನುವಾರ, ಫೆಬ್ರವರಿ 21, 2016

ಕಾಲಹರಣವದೇತಕೆ?

ಎನ್ನ ಚುಂಬಿಸಿ ಪುಳಕಗೊಳಿಸದೆ
ಕಾಲಹರಣವ ಗೈದರೆ?
ಅಧರಚುಂಬನ ಬಲು ರೋಮಾಂಚನ-
ವೆಂದು ಕವಿತೆಯ ಬರೆದರೆ?

ಏನ ಹೇಳಲಿ ನಿನಗೆ ನಲ್ಲನೆ!
ರಸಿಕನಲ್ಲದ ಜೀವನೆ!
ಭಾವಮೋಚನಕೆಂದು ಗೀಚುತ
ತಾನು ಪಂಡಿತಕವಿಯೆನೆ

ಹೂವ ಸುತ್ತುತಲಿರುವ ದುಂಬಿಯು
ಜೇನ ಸವಿಯದ ಹಾಗಿದೆ
ಹೂವ ಗಂಧವ ತೀಡಿ ಬಂದಿಹ
ಗಾಳಿಯಂತೆಯೆ ಸಾಗಿದೆ

ಬಾಳಗವಿತೆಯ ರಸವನರಿಯದೆ
ನೀಳಗವಿತೆಯದೇತಕೆ?
ಕೋಲ ಹಿಡಿದು ಕಡಲಿನಾಳವ
ಅಳೆಯುತಿರುವುದದೇತಕೆ?

ಡಿ.ನಂಜುಂಡ

21/02/2016

ಗುರುವಾರ, ಫೆಬ್ರವರಿ 18, 2016

ತೆಳ್ಳಗಾಗಲೆನ್ನ ಕವಿತೆ

ತೆಳ್ಳಗಾಗಲೆನ್ನ ಕವಿತೆ
ಬಳ್ಳಿಯಾಗಲಿ
ಬೆಳ್ಳಿ ಮೂಡುವಾಗ ಬಳುಕಿ
ಬೆಳ್ಳಗಾಗಲಿ

ಒಡವೆಗಳನು ಕಿತ್ತೊಗೆದು
ಬೆಡಗ ತೋರಲಿ
ನಡುವಿನಂದ ಸೆಳೆಯುವಂಥ
ಉಡುಗೆ ಧರಿಸಲಿ

ಮೆಲ್ಲ ಮೆಲ್ಲ ಪಲ್ಲವಿಸಲು
ಗೆಲ್ಲನೊಡೆಯಲಿ
ಕಲ್ಲ ಮೇಲೆ ಚರಣವಿರಿಪ
ಮೊಲ್ಲೆಯಾಗಲಿ

ಬರಿಗಾಲಿನ ಮೆದುನಡಿಗೆಯ
ಸರಳೆಯಾಗಲಿ
ಗಿರಿವನಗಳ ಸುತ್ತುವಂಥ
ತರಳೆಯಾಗಲಿ

ಚೆಲುವ ಚೆಲ್ಲಿ ನಾಚಿಕೆಯಲಿ
ನೆಲವ ಗೀರಲಿ
ತಳಿರುಗೆಂಪಿನಂತೆ ಕೆನ್ನೆ-
ಯೊಲವನೆರೆಯಲಿ

ಡಿ.ನಂಜುಂಡ

18/02/2016

ಮಂಗಳವಾರ, ಫೆಬ್ರವರಿ 16, 2016

ಶೃಂಗಾರವೀರ! ಬಾ

ಶೃಂಗಾರವೀರ! ಕುಸುಮಶರ! ಬಾರೋ
ಸಂಸಾರಸಾರÀಸೌರಭವ ತಾರೋ
ಭಸ್ಮಾಂಗರಾಗನಾ ಧ್ಯಾನಧಾರಣದಲ್ಲಿ
ಹೇಮಾದ್ರಿತನುಜಳಾನನವ ತೋರೋ

ಆದ್ಯಂತಪರ್ಯಂತಸೃಷ್ಟ್ಟಿಘನಸೌಂದರ್ಯ-
ವೃಷ್ಟಿಧಾರೆಯಲಿ ತಾ ಮಾರ್ಜನವ ಗೈದು
ಭೂವ್ಯೋಮವಿಸ್ತಾರಶಿವಲಿಂಗ ತಾನಾಗಿ
ಜೀವಾತ್ಮಭಾವದಲಿ ಕುಣಿದು ಕುಣಿದು

ತಾನೆ ನಾಟಕವಾಡಿ ತಾನೆ ನೋಡುವÀನಾಗಿ
ತಾನನದಿ ತಂತಾನೆ ಲಯವಾಗುತಿರಲು
ಮೌನದೊಳು ವಾಗರ್ಥರಸವು ಗರ್ಭಿತವಾಗಿ
ಬಂಧವಿಲ್ಲದ ಪ್ರೇಮವಂಕುರಿಸುತಿರಲು

ಅಂಗವಿಲ್ಲದ ನಿನಗೆ ಅಂಗನೆಯ ಸಂಗವದು
ಹೇಗಾಯಿತೆಂದು ನಾ ಹೇಳಲೇನು?
ಮಾತುಗಳ ಸ್ಪರ್ಶಸುಖದಲ್ಲಿ ಮೌನವೇ
ರಸಕಾವ್ಯವಾದಂತೆ-ಅಲ್ಲವೇನು?

ಡಿ.ನಂಜುಂಡ

16/02/2016

ಭಾನುವಾರ, ಫೆಬ್ರವರಿ 14, 2016

ಬಾನ್ದನಿಯೆ ಬಾ

ಚಿತ್ತಭೂಮಿಯನುತ್ತು ವಾಗ್ಬೀಜವಂ ಬಿತ್ತಿ
ಬತ್ತದಾ ಬೆಳೆತೆಗೆವ ಬಾನ್ದನಿಯೆ ಬಾ

ಸುತ್ತಲೂ ನೀನೊತ್ತುವರಿದು ಹರಿದಾರರಲಿ
ಹತ್ತಾರು ತೆನೆಗಳಂ ಬಾಗಿಸುತ ಬಾ

ಇತ್ತ ಬಂದೆನ್ನೆತ್ತಿ ಹೊತ್ತೊಳಗೆ ಕೊಂಡೊಯ್ದು
ಎತ್ತರಕೆ ಹಾರಿಸುತಲೇರಿಸುತಲಾಡು
ನೆತ್ತಿಗೇರುತಲೆದ್ದು ಮತ್ತೇರಿ ಕುಣಿಯುತಿರೆ
ಬತ್ತದಾ ಸುಳಿಯೊಳಗೆ ಸಾವಿರದ ಹಾಡು

ಗೊತ್ತೆನೆಗೆ ನೀ ಬರುವೆ ಗೊತ್ತಿಲ್ಲದಂತೆನಗೆ
ಗೊತ್ತುಗಳನೆತ್ತೊಗೆದು ಗೊತ್ತೊಂದ ಬಗೆದು
"ಗೊತ್ತಿಲ್ಲ"ದಾ ಲೋಪಸಂಧಿಯೊಳ ಸ್ವರದಂತೆ
ಗೊತ್ತುಂಟು ಮಾಡು ನೀ ಸಂಧಿಗಳನೊಡೆದು

ಎತ್ತಲೋ ಮಾಯವಾದಾ ಮುತ್ತ ಮೂಗುತಿಯು
ಮತ್ತೆ ತಾನವತರಿಸಿ ಬಳಿಗೆ ಬಂದಂತೆ
ಕತ್ತಲೆಯ ಹೆಬ್ಬಸಿರ ಸೀಳೊಡೆದು ಹೊರಬಂದು
ಸುತ್ತಲೂ ಹೊಂಗಿರಣ ವಿಸ್ತರಿಸುವಂತೆ

ತುತ್ತೊಂದ ತಿನ್ನುತಿರೆ ನಾಲಗೆಯು ರುಚಿಯೊಡೆದು
ಮತ್ತೊಂದ ತಾನೆಣಿಸಿ ಜಿನುಗುತಿರುವಂತೆ
ಹೆತ್ತಮ್ಮ ಹಗುರಾಗಿ ಕಂದನನ್ನೆದೆಗವುಚಿ
ಮುತ್ತುಗಳ ಮಳೆಗರೆದು ಅಳುತಣಿಸುವಂತೆ

ಬೆತ್ತದೇಟಿನ ಬರೆಗೆ ಬರೆದ ಬರಹದ ಹಾಗೆ
ಸತ್ತರೂ ಸವೆಯದಾ ಸತ್ಯದಾ ಹಾಗೆ
ಬತ್ತನ್ನದೊಳ ಸತ್ತ್ವ ತಾನಲ್ಲಿಯೇ ಉಳಿವಂತೆ

ಚಿತ್ತೈಸಿ ನೀನೆನ್ನೊಳಗೊಳಗೆ ಸಾಗೆ

ಶನಿವಾರ, ಫೆಬ್ರವರಿ 6, 2016

?

ಕೋಡಿಯೊಡೆದ ಕೆರೆಯು ನೀರು
ಓಡುವಂಥ ಮನಸಿದು
ಗಡಿಯ ಮೀರಿ ಚೆಲ್ಲಿ ಹರಿದು
ರಾಡಿ ಮಾಡುವಂತಿದು.

ಕಾಡುಗಳನು ಕಡಿದು ಮೆಟ್ಟಿ
ನಾಡಗಲದ ಗೋಡೆ ಕಟ್ಟಿ
ಬೇಡಗಳನು ಬೇಕೆನ್ನುತ
ಕೂಡಿ ರಾಶಿ ಹಾಕಿದೆ

ಅಗೋ ನೋಡಲ್ಲೋಡುತಿದೆ
ಇಗೋ ನೋಡಿಲ್ಲಾಡುತಿದೆ
ಬೇಗಬೇಗನಲೆದು ಅಲೆದು
ಸೊಗವನು ಬೆಂಬತ್ತಿದೆ

ಕಟ್ಟ ಕಡೆಗೆ ಹುಟ್ಟುಡೆಗೆಯೂ
ಬಟ್ಟ ಬಯಲಲಳಿದು ಹೋಗೆ
ಗುಟ್ಟೆಂಬುದು ಇನ್ನೆಲ್ಲಿದೆ?
ಸುಟ್ಟು ಹೋದುದೆಲ್ಲಿಗೆ?

ಡಿ.ನಂಜುಂಡ
06/02/2016