ನೀರ್ತುಂಬುವುದು ಹಬ್ಬ ಎಣ್ಣೆ ಸ್ನಾನವು ಹಬ್ಬ
ಗೋವುಗಳ ಪೂಜಿಸಲು ಇಹುದೊಂದು ಹಬ್ಬ
ಹೊಸ ಹರುಷದಲ್ಲಿ ಹೊಸತುಡೆಯನುಡುವುದು ಹಬ್ಬ
ಸಾಲು ಸಾಲಲಿ ಹಣತೆ ಹಚ್ಚುವುದು ಹಬ್ಬ
ಆಕಾಶ ಬುಟ್ಟಿಗಳ ಸೂರ ತುದಿಯಲಿ ಸಿಗಿಸಿ
ಕಣ್ ದಣಿಯೆ ನೋಡುವುದು ನಮಗೆ ಹಬ್ಬ
ಅಲ್ಲಲ್ಲಿ ಕೋಲ್ದೀಪಗಳ ಹಚ್ಚುವುದು ಹಬ್ಬ
ಹಾಡುವುದು ಕುಣಿಯುವುದು ಎಲ್ಲವೂ ಹಬ್ಬ
ಮೌನವಿರುವುದು ಹಬ್ಬ ಧ್ಯಾನಗೈವುದು ಹಬ್ಬ
ಬಾಯ್ತುಂಬ ಮಾತಾಡೆ ಹಬ್ಬವೋ ಹಬ್ಬ
ಎಲ್ಲ ಕಜ್ಜಗಳೆಮಗೆ ಕಜ್ಜಾಯದಂತಾಗೆ
ಕ್ಷಣ ಕ್ಷಣವು ಹೊಸೆಯುತಿದೆ ಹೊಸತೊಂದು ಹಬ್ಬ
ಡಿ.ನಂಜುಂಡ
28/10/2016