ಶನಿವಾರ, ಅಕ್ಟೋಬರ್ 1, 2016

?

ಕೆಳಕುದುರಿ ಮಣ್ಣಿನೊಳು ಬೆರೆತ ಎಲೆಗೊಳಕುಗಳ
ಎಳೆದು ಮತ್ತದನೆ ಫಲವೀಯುವಾ ನಾವು
ಅಳಿದು ಪಳೆಯುಳಿಕೆಯೊಲು ನೆಲಕೆ ಸಾರವನಿತ್ತು
ಬೆಳೆಯ ಕಾಳ್ಗಳಿಗೇರಿ ಕೆಳಗೆ ಬಾಗುವೆವು
ಸಾವಯವ ಸಾರವಿರೆ ಗೋವ ವರದಾನವಿರೆ
ಭಾವರಂಜಕವೀವ ಬಾನು ದನಿಯನೆರೆ
ಯಾವುದೇ ಅನ್ಯರಸಗೊಬ್ಬರಗಳೇತಕ್ಕೆ
ನಾವು ಸಹಕಾರಗಳನೆಲ್ಲೆಡೆಯು ಬೀರೆ
ಎಲೆ ಮನುಜ ನೀನಾಸೆಗಡಿಯಾಳಿನಂತಾಗಿ
ಎಲೆಯ ನಿಜಬೆಲೆಯನೂ ತಿಳಿಯದಿಹೆಯೇಕೆ?
ಕಾಲದಾ ಸಹಜ ಗತಿಯಲ್ಲಿ ಮಾಗುವ ಮುನ್ನ
ಕೊಲೆಗಡುಕನೊಲು ಹಲವು ವಿಷ ಸುರಿವೆಯೇಕೆ?
ಕಾಮಾದಿ ಕೀಟಗಳು ಕೊರೆಯುತಿರಲೊಳಗೊಳಗೆ
ನೀ ಮೊದಲು ಅವುಗಳಿಗೆ ಬೆಂಕಿಯನು ಹಾಕು
ವ್ಯಾಮೋಹರೋಗಕ್ಕೆ ಅದರ ಬೂದಿಯೆ ಸಾಕು
ಭೂಮಾತೆಯೊಲಿಯಲಿಕೆ ಸಾಕುರಿವ ಬೆಳಕು
ಇಂತು ನಿಮ್ಮ ಮರಗಳು
30/09/2016
(ಮಿತ್ರರೊಬ್ಬರ ಕೋರಿಕೆಯ ಮೇರೆಗೆ ಬರೆದದ್ದು)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ