ಭಾನುವಾರ, ಅಕ್ಟೋಬರ್ 16, 2016

ಭೂಮಾತೆ

ಗಂಧವತಿ ಭೂಮಾತೆ ಬಂಧಮೋಕ್ಷವಿದಾತೆ
ಒಂದು ಕೊಡೆ ಹಲವೀವ ಆನಂದಪಾತ್ರೆ
ಎಂದೆಂದಿಗೂ ಸೆರಗ ಹರಹಿನಲಿ ನೆರಳಿತ್ತು
ಕಂದರನು ಪೊರೆಯುತಿಹ ಅನ್ನದಾತೆ

ಹುಣ್ಣಿಮೆಯ ಹೊಂಗಿರಣವೂಡುತಿರೆ ಮಣ್ಣಿನಲಿ
ಕಣ್ಣೆವೆಯನರೆ ತೆರೆದು ಔಷಧವನರೆವೆ
ಬಣ್ಣಗಳಲೂಡಿಸುತ ಮರಬಳ್ಳಿಗಳಿಗೆಲ್ಲ
ತನ್ನೊಲವಿನೊಳಲೆಯೊಳು ತಂಪನೆರೆವೆ

ಹಸಿರ ಕುಡಿಯುಸಿರಿನಲಿ ಬಸಿರೊಡೆದ ಕಾಳ್ಗಳಲಿ
ಹೊಸತನÀ ಕುಡಿಯೊಡೆದು ಕೆಂಪಗಾಗೆ
ನಸುನಗುವು ಟಿಸಿಲೊಡೆದು ತೊದಲುಲಿಯ ಮಧುವಾಗಿ
ಹಸುಗೂಸನಾಡಿಸುವ ಲಾಲಿಯಾಗೆ

ಬಾನಗಲ ಮೈದಳೆದ ನಾನು ನಾನೆಂಬುದದು
ಕಾನ ಮಣ್ಣೊಳಗಿಳಿದು ಲೀನವಾಗೆ
ತಾನನದ ದನಿಯೊಂದು ಮರು ಜನ್ಮದಳುವಾಗಿ
ತಾನುಳಿಯೆ ನೀ ಕಾಯೆ ತಾಯಿಯಾಗೆ

ಡಿ.ನಂಜುಂಡ
16/10/2016

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ