ಶನಿವಾರ, ಅಕ್ಟೋಬರ್ 1, 2016

ಬಾ ದುರ್ಗೇ

ದುಷ್ಟವಿನಾಶಿನಿ ದುರ್ಗತಿಹಾರಿಣಿ
ದುರ್ಜನಭಂಜಿನಿ ಹೇ ದುರ್ಗೇ
ದುರಿತವಿದೂರಿಣಿ ದುಃಖನಿವಾರಿಣಿ
ದುರ್ವೃತ್ತಶಮನಿ ನವದುರ್ಗೇ

ಅಂತಃಕರಣದೊಳಾವಿರ್ಭವಿಸಿ
ಅಷ್ಟದಲೋಪರಿ ನೀ ನೆಲೆಸಿ
ದುರಹಂಕಾರವ ದೂರೀಕರಿಸಲು
ಕಂಠವಿಶುದ್ಧದಿ ಹೂಂಕರಿಸಿ

ವ್ಯೋಮಾಂತರ್ಗತದೋಂಕಾರವನು
ನಾಭೀಮೂಲಕೆ ತಂದಿರಿಸಿ
ನಾದನಿನಾದವಿನೋದಾಮೋದವ
ಸುನಿಧಾನದೊಳಾಹತಗೊಳಿಸಿ

ಪ್ರಾಣದ ಕಣಕಣವನು ಸಂಕರ್ಷಿಸಿ
ಧ್ಯಾನಧ್ಯೇಯಕೆ ಧಾರಣೆಗೆ
ಮತಿಸಂಚಾರದ ಪಥದರ್ಶನಕೆ
ನಿತ್ಯಮಕ್ತತೆಯ ಅನುಭವಕೆ
ಬಾ ಮಮ ಜೀವನ ಸದ್ಗತಿಗೆ

ಡಿ.ನಂಜುಂಡ

01/10/2016

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ