ವಾಗರ್ಥಶೃಂಗಾರಕೇಲಿಯಾ ಸಮಯದಲಿ
ಅರ್ಥವನು ಕೊಲೆಗೈದ ಪಾಪಿ ನೀನೋ?
ದೇಹದೊಳಗಿರುವಾತ್ಮ ನಿತ್ಯವಾಗಿರುವಂತೆ
ಅರ್ಥಕ್ಕೆ ಸಾವಿಲ್ಲ -ಅಲ್ಲವೇನೋ?
ತನುಮನವು ಮೈಮರೆತು ನಾಮರೂಪವ ಭಜಿಸೆ
ಅರಿವು ಗೋಚರಿಪುದೇ ಅರಿತು ಹೇಳು?
ದೇಹಭಾವವನಳಿಸಿ ಮನವ ಬಾನೊಳಗಿಳಿಸಿ
ಆತ್ಮಾರ್ಥಭಾವಗೀತೆಯೊಲು ಕೇಳು
ವಾಕ್ಸೀತೆಯಪಹರಿಸೆ ಅರ್ಥರಾಮನು ಬಿಡದೆ
ಹತ್ತು ತಲೆಗಳ ಕಡಿದು ಮತ್ತೆ ಪಡೆಯೆ
ಪ್ರಕೃತಿಪುರುಷರ ಹಾಗೆ ಕವಿಋಷಿಯ ಭಾವದೊಳು
ರಾಮಸೀತೆಯ ಹಾಗೆ ಜೀವದಳೆಯೆ
ವಾಗರ್ಥದಂತಿಹುದು ಕ್ರೌಂಚಮಿಥುನ
ವ್ಯಥೆಯೆ ಕತೆಯಾದಂತೆ -ರಾಮಾಯಣ
ಡಿ.ನಂಜುಂಡ
15/10/2016
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ