ಬುಧವಾರ, ಮೇ 25, 2016

ಧರ್ಮ-ಕರ್ಮ

ಸುಡುಗಾಡ ಕಟ್ಟಿಗೆಯು ಸುಟ್ಟೀತೆ ಕರ್ಮಗಳ
ಪ್ರಾರಬ್ಧಕರ್ಮ ತಾ ಬಿಟ್ಟೀತೆ ಸುಡದೆ
ಜ್ಞಾನಾಗ್ನಿಕುಂಡದೊಳಗರ್ಪಿಸಿದ ಪ್ರತಿಯೊಂದೂ
ಧರ್ಮರೂಪದಿ ಬಂದು ಪೊರೆದೀತು ಬಿಡದೆ

ಸ್ವಾರ್ಥದಿಂ ಯೋಚಿಸಿದ ವಸ್ತುವಿಷಯಗಳಲ್ಲಿ
ಪ್ರತಿಫಲಗಳೊಡೆತನವು ನಮ್ಮದಾಗಿರಲು
ಒಳಿತು ಕೆಡುಕುಗಳೆಂಬ ತೀರ್ಮಾನವಲ್ಲಿಹುದು
ದ್ವಂದ್ವವೇ ನಮ್ಮ ಭಾವದಲ್ಲಿರಲು

ದ್ವಂದ್ವತೀರ್ಮಾನಗಳ ತೀವ್ರತೆಯನನುಸರಿಸಿ
ದ್ವಂದ್ವದಲೆಗಳು ಮನದ ಆಳಕಿಳಿಯುವುವು
ವರ್ತುಲಾಕಾರದಲಿ ಸುತ್ತುತಲಿ ಮೇಲೆದ್ದು
ಮತ್ತೆ ಚಿತ್ತವೃತ್ತಿಯ ರೂಪ ತಳೆಯುವುವು

ನಿಷ್ಕಾಮಚಿಂತನೆಯ ವಸ್ತುವಿಷಯಗಳಲ್ಲಿ
ದ್ವಂದ್ವತೀರ್ಮಾನಗಳ ಒತ್ತಡಗಳಿಲ್ಲ 
ಇದು ಒಳಿತು, ಅದು ಕೆಡುಕು ಎಂಬ ಭಾವಗಳಿಲ್ಲ
ಕರ್ಮಫಲದರ್ಪಣೆಗೆ ಕರಗಲಿಹುದೆಲ್ಲ

ನಮ್ಮದಾವುದೂ ಇಲ್ಲವೆಂಬ ಜ್ಞಾನವೆ ಧರ್ಮ
ನಮ್ಮದೆಂಬುದು ನಮ್ಮ ಬಂಧಿಸುವ ಕರ್ಮ
ಸ್ವಾರ್ಥವೇ ಬಂಧ; ನಿಸ್ಸ್ವಾರ್ಥವೇ ಮುಕ್ತಿಯದು
ಅನ್ಯವೆಲ್ಲವು ಮಿಥ್ಯವೆಂಬುದರ ಮರ್ಮ

ಡಿ.ನಂಜುಂಡ
25/05/2016


ಸೋಮವಾರ, ಮೇ 23, 2016

ಆಟಗಳ ನೋಡು

ಕಡಲಲೆಗಳುಬ್ಬರವು ಕೆಳಗಿಳಿವ ಪರಿ ನೋಡು
ಆಡಿ ಮತ್ತದು ಮೇಕೇರುವುದ ನೋಡು
ಕಡಲಿನಂತೆಯೆ ಮನದ ಅಲೆಗಳೆರಡನು ನೋಡು
ಆಡುತಿಹ ತತ್ತ್ವಗಳನೊಂದಾಗಿ ನೋಡು

ಸುಖದಲೆಯ ಮೇಲೇರಿ ಮತ್ತನೊಲು ಕುಣಿಯದಿರು
ದುಃಖದಲೆಯಲಿ ಜಾರಿ ಕ್ಷಣದಿ ಕುಸಿಯದಿರು
ಅಲೆಗಳೆರಡರ ಮೂಲಸಮತಲದಿ ಸ್ಥಿತನಾಗಿ
ಆಟವಾಡುವ ಬಯಲಿನೆಡೆಗೆ ನೋಡುತಿರು

ಮಾತುಗಳು ಭೋರ್ಗರೆದು ಹೊನಲಿನಂತೆಯೆ ಹರಿದು
ಅರ್ಥದಂಬುಧಿಯಲ್ಲಿ ತನ್ನತನ ಕಳೆದು
ಒಬೊಬ್ಬರೊಂದೊಂದು ರೀತಿಯಲಿ ಅರ್ಥೈಸಿ
ಮಥಿಸಿದಾ ತತ್ತ್ವಗಳನಾಗಸಕೆ ಸೆಳೆದು

ಅಲ್ಲಿ ಬಾನ್ದನಿಯಲ್ಲಿ ತೇಲಿಸುತಲಾಡಿಸುತ
ಲಾಲಿಸುತ ಪಾಲಿಸುತ ಜಾಲಾಡಿಸುತಲಿ 
ಇರುವಿನೊಂದರ್ಥವನು ವಿಸ್ತಾರವಾಗಿಸಿಹ
ಚೇತನಕೆ ಶರಣೆನ್ನು ಪರಮ ಸ್ವಾರ್ಥದಲಿ

ಡಿ.ನಂಜುಂಡ

23/05/2016

ಭಾನುವಾರ, ಮೇ 22, 2016

ಒಲವ ಹರಿವು

ಚೆಲುವು ಎದೆಯೊಲವಾಗಿ ಸಂಚಲಿಸದಿಹುದೆ?
ಕಂಗಳಾರ್ಜಿತ ಪುಣ್ಯ ಫಲಿಸಿದಾಗ
ಜಡಿಮಳೆಯು ಇಳೆಗಿಳಿದು ಹೊಳೆಯು ಮೈನೆರೆದು
ಕೆಂಬಣ್ಣದುಡೆಯುಟ್ಟು ಬಳುಕುವಾಗ

ಕಾರ್ಗಲ್ಲ ಬಂಡೆಗಳ ಸುತ್ತ ಸುತ್ತುತಲೆದ್ದು
ಕೇಕೆ ಹಾಕುತಲಾಡಿ ನಲಿಯುವಾಗ
ನಗೆಯ ಹನಿಗಳನು ನೆಲಕಪ್ಪಳಿಸಿ ಕುಪ್ಪಳಿಸಿ
ಒನಪು ಒಯ್ಯಾರದಲಿ ಕುಣಿಯುವಾಗ

ದಟ್ಟ ಕಾನನದಲ್ಲಿ ಕಣ್ವ ಋಷಿ ಕಾಪಿಟ್ಟ
ಚೆಲ್ವಿಯಾ ಚಂಚಲದ ಕಣ್ಣಿನೊಳ ಹೊಳಪು
ತೇಲಿ ಜೋಗದ ಬೆಳಕ ಕುಡಿಯಾಗಿ ಹೊರಹೊಮ್ಮಿ
ರಾಜಂಗೆ ಬಂದಂತೆ ಉಂಗುರದ ನೆನಪು

ಬನದ ಶಂಕರಿಯೊಮ್ಮೆ ಸಂಚರಿಪ ಇಚ್ಛೆಯಲಿ
ಮಳೆಯ ಹನಿಗಳ ಪಿಡಿದು ಹೊಳೆಯ ಮೈಯಾಗೆ
ಹಸಿರುಕಾಯ್ಗಳ ಹೊಕ್ಕು ಹೊಸ ಕಾಯ ಪಡೆದಂತೆ
ದೇವಿ ಶಾಕಂಭರಿಯು ತರಕಾರಿಯಾಗೆ

ಮಳೆಯು ಬರಿ ಮಳೆಯಲ್ಲ ಹೊಳೆಯು ಬರಿ ಹೊಳೆಯಲ್ಲ
ಸೃಷ್ಟಿಯೊಲವಿನ ಹರಹು, ಚೆಲುವ ಹರಿವು
ಹರಹು ಬರಿ ಹರಹಲ್ಲ ಹರಿವು ಬರಿ ಹರಿವಲ್ಲ
ಜಗದರಿವನರಿಯಲಿಕೆ ಇರುವ ಸುಳಿವು

ಡಿ.ನಂಜುಂಡ
22/05/2016

ಮಂಗಳವಾರ, ಮೇ 17, 2016

ಆಶೆ

ಬಾಲ್ಯವು ಕಳೆಯಿತು ಯೌವನವಳಿಯಿತು
ಮುಪ್ಪಡರಿತು ಮೈಮನಗಳಿಗೆ
ಆಶಾಗೋಪುರದೆತ್ತರವಿನ್ನೂ
ಏರುತಲಿದೆ ಬಾನೆತ್ತರಕೆ.

ಹೆಣ್ಣು-ಹೊನ್ನುಗಳು ಸಾಕು ಸಾಕೆಂದು
ಕನಸಿನಲು ಹೇಳನೆಂದೂ
ಮಾತು ಮಾತಿಗೂ ಹೇಳುತಿಹ ಮಣ್ಣಿ-
ನೊಡೆತನವು ತನ್ನದೆಂದೂ

ಬಾಳಗಡಿ ಸನಿಹವಾದರೂ ಬೇಲಿ-
ಗಡಿಯನಡಿದೂರ ವಿಸ್ತರಿಸಿ
ಒಡೆಯ ತಾನೆಂದು ಸಾರಿ ಹೇಳುವನು 
ಅಲ್ಲಲ್ಲಿ ಹೆಸರ ಕೆತ್ತಿರಿಸಿ

ಕಡೆಗಲ್ಲಿನಡಿಯ ಹುಡಿಯಾಗಿ ಹೋಗೆ
ತಾನೆಂಬುದದರ ಅಡಿಯಾಗೆ
ಒಡೆತನವ ನೆನೆದು ವಡೆಯ ಸವಿಯುವರು
ಎಲ್ಲವೂ ಕೊನೆಗೆ ಮರೆಯಾಗೆ

ಡಿ.ನಂಜುಂಡ
17/05/2016



ಗುರುವಾರ, ಮೇ 12, 2016

ಒಲವು

ಮಳೆಯು ಇಳೆಗಿಳಿಯೆ ನೆಲದ ಒಲವುಕ್ಕಿ
ಕಾಳ್ ಸೀಳಿ ಮೊಳೆತು ಚಿಮ್ಮಿ ಚಿಗುರಿ
ಗೆಲ್ಲು ಗೆಲ್ಲುಗಳ ನಡುವೆ ಅಲ್ಲಲ್ಲಿ
ಬಸಿರೊಡೆಯೆ ನೂರು ಬಾರಿ

ದುಂಬಿ ಹಿಂಡುಗಳು ಜೇನ ತುಂತುಂಬಿ
ಕುಡಿದು ಕುಪ್ಪಳಿಸಿ ಹಾರಲಲ್ಲಿ
ಚೆಲುವು ಚಲಿಸಿದೊಲು ಒಲವು ಫಲಿಸಿದೊಲು
ಕೆಲವು ಹಲವಾಗಿ ನಲಿಯಲಲ್ಲಿ

ಮಂತ್ರಘೋಷಗಳು ತಾನೆ ಹೊಮ್ಮುವುವು
ಹಕ್ಕಿಗಳ ಕೊರಳ ತಂತುಗಳಲಿ
ಹೊನಲುಗಳು ನೆರೆದು ಬೀಗಿ ನಡೆಯುತಿರೆ
ತಳುಕು ಬಳುಕಿನಲಿ ತಗ್ಗುಗಳಲಿ

ಚೆಲುವು ಕಣ್ತುಂಬಿ ಎದೆ ಹೂವಿಗಿಳಿದು
ಅಕ್ಷರಕ್ಷರವ ಸೇರುತಿಹುದು
ನಲವು ತಾನುಬ್ಬಿ ಕಣಕಣಕೆ ಹಬ್ಬಿ
ಸುಗ್ಗಿ ಕುಣಿತದೊಲು ಕುಣಿಯುತಿಹುದು 

ಡಿ.ನಂಜುಂಡ
12/05/2016