ಚೆಲುವು ಎದೆಯೊಲವಾಗಿ ಸಂಚಲಿಸದಿಹುದೆ?
ಕಂಗಳಾರ್ಜಿತ ಪುಣ್ಯ ಫಲಿಸಿದಾಗ
ಜಡಿಮಳೆಯು ಇಳೆಗಿಳಿದು ಹೊಳೆಯು ಮೈನೆರೆದು
ಕೆಂಬಣ್ಣದುಡೆಯುಟ್ಟು ಬಳುಕುವಾಗ
ಕಾರ್ಗಲ್ಲ ಬಂಡೆಗಳ ಸುತ್ತ ಸುತ್ತುತಲೆದ್ದು
ಕೇಕೆ ಹಾಕುತಲಾಡಿ ನಲಿಯುವಾಗ
ನಗೆಯ ಹನಿಗಳನು ನೆಲಕಪ್ಪಳಿಸಿ ಕುಪ್ಪಳಿಸಿ
ಒನಪು ಒಯ್ಯಾರದಲಿ ಕುಣಿಯುವಾಗ
ದಟ್ಟ ಕಾನನದಲ್ಲಿ ಕಣ್ವ ಋಷಿ ಕಾಪಿಟ್ಟ
ಚೆಲ್ವಿಯಾ ಚಂಚಲದ ಕಣ್ಣಿನೊಳ ಹೊಳಪು
ತೇಲಿ ಜೋಗದ ಬೆಳಕ ಕುಡಿಯಾಗಿ ಹೊರಹೊಮ್ಮಿ
ರಾಜಂಗೆ ಬಂದಂತೆ ಉಂಗುರದ ನೆನಪು
ಬನದ ಶಂಕರಿಯೊಮ್ಮೆ ಸಂಚರಿಪ ಇಚ್ಛೆಯಲಿ
ಮಳೆಯ ಹನಿಗಳ ಪಿಡಿದು ಹೊಳೆಯ ಮೈಯಾಗೆ
ಹಸಿರುಕಾಯ್ಗಳ ಹೊಕ್ಕು ಹೊಸ ಕಾಯ ಪಡೆದಂತೆ
ದೇವಿ ಶಾಕಂಭರಿಯು ತರಕಾರಿಯಾಗೆ
ಮಳೆಯು ಬರಿ ಮಳೆಯಲ್ಲ ಹೊಳೆಯು ಬರಿ ಹೊಳೆಯಲ್ಲ
ಸೃಷ್ಟಿಯೊಲವಿನ ಹರಹು, ಚೆಲುವ ಹರಿವು
ಹರಹು ಬರಿ ಹರಹಲ್ಲ ಹರಿವು ಬರಿ ಹರಿವಲ್ಲ
ಜಗದರಿವನರಿಯಲಿಕೆ ಇರುವ ಸುಳಿವು
ಡಿ.ನಂಜುಂಡ
22/05/2016
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ