ಕಡಲಲೆಗಳುಬ್ಬರವು ಕೆಳಗಿಳಿವ ಪರಿ ನೋಡು
ಆಡಿ ಮತ್ತದು ಮೇಲಕೇರುವುದ ನೋಡು
ಕಡಲಿನಂತೆಯೆ ಮನದ ಅಲೆಗಳೆರಡನು ನೋಡು
ಆಡುತಿಹ ತತ್ತ್ವಗಳನೊಂದಾಗಿ ನೋಡು
ಸುಖದಲೆಯ ಮೇಲೇರಿ ಮತ್ತನೊಲು ಕುಣಿಯದಿರು
ದುಃಖದಲೆಯಲಿ ಜಾರಿ ಕ್ಷಣದಿ ಕುಸಿಯದಿರು
ಅಲೆಗಳೆರಡರ ಮೂಲಸಮತಲದಿ ಸ್ಥಿತನಾಗಿ
ಆಟವಾಡುವ ಬಯಲಿನೆಡೆಗೆ ನೋಡುತಿರು
ಮಾತುಗಳು ಭೋರ್ಗರೆದು ಹೊನಲಿನಂತೆಯೆ ಹರಿದು
ಅರ್ಥದಂಬುಧಿಯಲ್ಲಿ ತನ್ನತನ ಕಳೆದು
ಒಬೊಬ್ಬರೊಂದೊಂದು ರೀತಿಯಲಿ ಅರ್ಥೈಸಿ
ಮಥಿಸಿದಾ ತತ್ತ್ವಗಳನಾಗಸಕೆ ಸೆಳೆದು
ಅಲ್ಲಿ ಬಾನ್ದನಿಯಲ್ಲಿ ತೇಲಿಸುತಲಾಡಿಸುತ
ಲಾಲಿಸುತ ಪಾಲಿಸುತ ಜಾಲಾಡಿಸುತಲಿ
ಇರುವಿನೊಂದರ್ಥವನು ವಿಸ್ತಾರವಾಗಿಸಿಹ
ಚೇತನಕೆ ಶರಣೆನ್ನು ಪರಮ ಸ್ವಾರ್ಥದಲಿ
ಡಿ.ನಂಜುಂಡ
23/05/2016
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ