ಗುರುವಾರ, ಜನವರಿ 24, 2013

ನನ್ನ ಚೆಲುವಿನ ಕವನ



ಬಾರೆ ಭಾಮಿನಿಯೆ! ಎದೆಯ ಬಾನಿನಲಿ
ಬಣ್ಣದುಡುಗೆ ಧರಿಸಿ ಬಾ.
ತೋರೆ ಸಂಪದವ ಬೀರಿ ಹೊಸತನವ
ಸ್ವರವರ್ಣಚರಣೆ ಬಾ.

ಹೂಬನದ ಚೆಲುವೆ! ಹೊಂಬಿಸಿಲ ನಗುವೆ!
ಅಂಬರದ ದನಿಯ ಸಿರಿಯೆ!
ಚುಂಬಿಸುತ ಮನವ ಹೊಮ್ಮಿಸುತ ಹೊಳಪ
ಘಮಘಮಿಸು ಬಾರೆ ಒಲವೆ!

ಮೃದುವಾದ ಚಿಗುರ ಹದವಾದ ಹಣ್ಣ
ಮಾಧುರ್ಯ ತುಂಬಿ ಬಾರೆ.
ಅಣಿಗೊಣಿಸಿ ಸ್ವನವ ಮುದಗೊಳಿಸಿ ಮನವ
ಕಣಕಣದಿ ಕಲೆತು ಬಾರೆ.

ಭಾಮಿನಿಯೆ! ಬಾರೆ ಬಾ ಬಾನತಾರೆ!
ನೀನೆನ್ನ ಭಾವವದನ.
ಕಾಮಿನಿಯೆ! ಬಾರೆ ಕೆಂದೊಲವ ತಾರೆ
ನೀನೆನ್ನ ಮನದ ಕವನ.


ಬುಧವಾರ, ಜನವರಿ 23, 2013

ಚಿತ್ತವನುಳುಮೆ ಮಾಡೋ...


ಉಳುಮೆ ಮಾಡೆಲವೋ ರಂಗ! ಉಳುಮೆ ಮಾಡೋ...
ಚಿತ್ತ ಭೂಮಿಯನುತ್ತು ಬಿತ್ತಿ  ಬೆಳೆಯ ತೆಗೆಯೋ...

ಬರಡುಹೊಲವು ಬಿರಿದನೆಲವು
ಬರದು ಬೆಳೆಯು ಸಾರಹೀನ.
ಕರುಣೆಯಿಂದ ನೊಗವ ಪಿಡಿದು
ಚರಣಕಮಲವಿರಿಸಿ ನೀನು.

ಮನದ ಬಯಕೆ ಮೊಳೆತು ಬರಲು
ನಾನು ಎಂಬ ಕಳೆಯ ಕಳೆದು
ಮಣಿವೆ ನಿನ್ನ ಉಳುಮೆ ತರಕೆ
ಹಣವ ಕೊಡದೆ ಜಿಪುಣನಾಗಿ.

ಉಳುಮೆಯಿಂದ ಬಂದ ಕಣವ
ತಾಳ್ಮೆಯಿಂದ ಹೆಕ್ಕಿ ನಾನು
ಸಿಕ್ಕ ಸಿಕ್ಕ ಜನಕೆ ಹಂಚಿ
ಮಿಕ್ಕ ಅನ್ನ ನನಗೆ ನಿನಗೆ.

ಸೋಮವಾರ, ಜನವರಿ 21, 2013

ನಾಗನಡೆಯುಂಟು


ಚೌಡಿಬನದ ಮುಂದೆ
ಗೌಡ್ರ ಮನೆಯ ಹಿಂದೆ
ನಡೆಯುಂಟು...
ನಾಗನಡೆಯುಂಟು.

ದೇವಿಗುಡಿಯ ಮುಂದೆ
ಗೋವ ಹಟ್ಟಿ ಹಿಂದೆ
ನಡೆಯುಂಟು...
ನಾಗನಡೆಯುಂಟು.

ಗೋಳಿಮರದ ಮುಂದೆ
ಕೋಳಿಗೂಡ ಹಿಂದೆ
ನಡೆಯುಂಟು...
ನಾಗನಡೆಯುಂಟು.

ಮೂರು ರಸ್ತೆ ಮುಂದೆ
ಮೋರಿ ಕಟ್ಟೆ ಹಿಂದೆ
ನಡೆಯುಂಟು...
ನಾಗನಡೆಯುಂಟು.

ಜೀವತಳೆದ ಮೇಲೆ
ಜೀವತೊರೆದ ಮೇಲೆ
ಹೇಳುತ್ತಾರೆ.. ಎಲ್ಲ..
ನಡೆಯುಂಟು...
ನಾಗನಡೆಯುಂಟು.

ಭಾನುವಾರ, ಜನವರಿ 20, 2013

ನಾವು ನಮ್ಮನು ಮರೆಯಲಿ


ಹೃದಯಪುಷ್ಪವರಳಲಿ... ಮಧುರ ಜೇನು ತುಂಬಲಿ...
ಪ್ರೇಮಗಂಧ ಸೂಸಲಿ... ಅಮೃತಪದವನೇರಲಿ.
ಶಿಶಿರ ಕಳೆದು ಚೈತ್ರಬರಲು ಮರಮರದಲೂ ಕುಕಿಲುಲಿ.
ತಂಬಿಬರಲಿ ಪ್ರಣವನಾದ ಹೃದಯದೊಳಗೆ ಮೊಳಗಲಿ.
ನಯನರವಿಯ ಬೆಳಕಲಿ, ವಿಮಲಚಿತ್ತಜಲದಲಿ..
ತಮವ ಕಳೆದು ಮನವ ತೊಳೆಯೆ ನಾವು ನಮ್ಮನು ಮರೆಯಲಿ.

ಶನಿವಾರ, ಜನವರಿ 19, 2013

ಪ್ರೀತಿಕಡಲು


ನಾನು ನಾನೆಂಬ ಬತ್ತದಾ ಜಲ ಮೈತುಂಬಿ
ಹೊನಲಾಗಿ ಮೆರೆಯುತಿರೆ ಭಾವದೊಡಲು.
ಕೈ ಬೀಸಿ ಕರೆಯುತಿದೆ ತನ್ನತ್ತ ಸೆಳೆಯುತಿದೆ
ಬಾಯೆನುತ ನನ್ನವಳ ಪ್ರೀತಿಕಡಲು.

ಏರುತಿದೆ ಇಳಿಯುತಿದೆ ನನ್ನವಳ ಪ್ರೀತಿಯಲೆ
ಕಡೆಯುತಿದೆ ನಾನೆಂಬ ಭಾವಜಲವ.
ತಿಳಿಯಾಗಿ ತೇಲುತಿರೆ ಒಲುಮೆಯಾ ಮುತ್ತೆಲ್ಲ
ನತ್ತಾಗಿ ಬೆಳೆಗುತಿದೆ ಮತ್ತೆ ಮೊಗವ.

ಪ್ರೀತಿಯಾ ಮುತ್ತೊಂದು ಚೆಲುವಿನಾ ನತ್ತೊಂದು
ಕಡಲಿನಾ ಒಡಲಿನಲಿ ತೇಲಿ ತೇಲಿ.
ಕಡೆದ ಭಾವದ ಬೆಣ್ಣೆ ಒಲವಿನಲಿ ಕರಗಿರಲು
ನಾನಿಲ್ಲ ಅವಳೆಲ್ಲ ಬಾಳಿನಲ್ಲಿ.

ಮಂಗಳವಾರ, ಜನವರಿ 15, 2013

ಕತ್ತಲೆಯ ಕಲೆ


ಕತ್ತಲೆಯು ಕವಿದಿರಲು ಚಿಂತಿಸದಿರೆಲೆ ಮನವೆ!
ಕತ್ತಲೆಗೆ ಬೆಲೆಯನ್ನು ನೀ ಕಟ್ಟಬೇಡ.
ಕತ್ತಲೆಯ ಒಲವಲ್ಲಿ ಕಾವ್ಯದಾ ಒರತೆಯಿದೆ
ಕತ್ತಲೆಯ ಕಪ್ಪನ್ನು ನೀ ಹಳಿಯಬೇಡ.

ಕತ್ತಲೆಯ ಕಾರಿರುಳೆ ತಾರೆಗಳ ಜೀವಾಳ
ಕತ್ತಲೆಯೆ ಬೆಳಕಹೆರುವ ಹೆಬ್ಬಸಿರು.
ಕತ್ತಲೆಯಲಡಗಿದೆ ಕಲೆಯೆಂಬೆರಡಕ್ಕರವು
ಕತ್ತಲೆಯ ಗರ್ಭದಲೆ ತಳೆದುದೀ  ಜೀವ.

ಬತ್ತದಾ ಭಾವಗಳು ಕತ್ತಲೆಯಲುದಿಸುವುವು
ಬತ್ತದಾ ಬಯಕೆಗಳು ಕಾರಿರುಳಿನಲ್ಲಿ.
ಬತ್ತದಾ ಹಾಲ್ದೆನೆಗೆ ಕತ್ತಲೆಯ ಗವಿಯಿರಲು
ಕತ್ತಲೆಗೆ ಬತ್ತದಿರಲೆಮ್ಮ ಕಲೆಯು.


ಶನಿವಾರ, ಜನವರಿ 12, 2013

ಎಲ್ಲೆಲ್ಲೂ ಸಂಕ್ರಾಂತಿ!


ಬಂದಿದೆ... ಬಂದಿದೆ.... ನಮಗಿದೋ....ಸಂಕ್ರಾಂತಿ.
ತಂದಿದೆ... ತಂದಿದೆ... ಮೊಗಮೊಗದಲೂ ಕಾಂತಿ.
ಆ ರವಿಯ ಪಥದಲ್ಲಿ.... ಮಕರಸಂಕ್ರಾಂತಿ.
ಜನಮನದ ರಥದಲ್ಲಿ.... ಸಂಸ್ಕೃತಿಕ್ರಾಂತಿ
ಬಾನಂಚಿನ ತಿಳಿಮುಗಿಲಿಗೆ.. ಹೊಂಬಣ್ಣದ ಕಾಂತಿ
ಮುಂಜಾನೆಯ ತಂಗಾಳಿಗೆ... ಹೂಗಂಧದ ಕ್ರಾಂತಿ
ಸಂಭಾವದ ಸಂಕಾಶಕೆ.. ಸುಪ್ರೇಮದ ಕಾಂತಿ
ಹೃತ್ಪದ್ಮದ ವಿಕಸನಕೆ... ಒಳಗಣ್ಣಿನ ಕಾಂತಿ
ಹೊಸಹುರುಪಿಗಿದೋ.. ಹೊಸಬಗೆಯ ಕ್ರಾಂತಿ.
ಹೊಸವಿಷಯಕಿದು.. ಜಸವಿಸರದ ಕ್ರಾಂತಿ

ಮಂಗಳವಾರ, ಜನವರಿ 8, 2013

ಮನಕರಗಿ ಅರಳಿತ್ತು ಹೃದಯದಲಿ ಹೂವು


ತಿಳಿನಗೆಯ ತೋಟದಲಿ ಅರಳಿರಲು ಹೂವೊಂದು
ಮನವೆಂಬ ಮರಿದುಂಬಿ ಜೇನನ್ನು ಹೀರಿ.
ಪರಿಮಳದ ಹೂವಿನಲಿ ಸಿಹಿಯನ್ನು ಸವಿಯುತಲಿ
ಮರೆತಿರಲು ಜಗದರಿವ ನಗುವ ಮತ್ತೇರಿ.

ಸವಿಯ ವ್ಯಸನದಿ ಅಲೆದು ಹುಡುಕಾಡಿ ನಗೆ ಹೂವ
ತೋಟವನು ಬೆಳೆಸಿರಲು ತನ್ನೊಳಗೆ ತಾನು.
ಮೊಗಬಿರಿದು ಹೂವುಗಳು ಸೊಗಸಾಗಿ ಅರಳಿರಲು
ಮಧುವನ್ನು ಸವಿಯತಿದೆ ತನ್ನನೇ ಮರೆತು.

ತನುವೆಲ್ಲ ಹೂವಾಗಿ ಕಣಕಣವು ಜೇನಾಗಿ
ತನ್ನನ್ನು ತಾನ್ ಕಳೆದು ನಗುವೊಂದೆ ಉಳಿದು.
ನಕ್ಕು ನಗಿಸುತ ನಲಿದು ಬದುಕೆಲ್ಲ ಹಗುರಾಗಿ
ಮನಕರಗಿ ಅರಳಿತ್ತು ಹೃದಯದಲಿ ಹೂವು.