ಇಳಿದು ಬರಲಂಗಳಕೆ
ಒಲವ ರೂಪಚಂದ್ರಿಕೆ
ಮಳೆಯಂತೆ ಎದೆಮಣ್ಣೊಳಿಂಗುತಿರಲಿ
ನಲಿವಾಗಿ ಮೊಳೆತೆದ್ದು ಚಿಗುರುತಿರಲಿ
ಬಾಳ ಬಾನನು ಬೆಳಗಿ
ಬೆಳಕನೀಯುತ ಬೀಗಿ
ನಲ್ಲೆಯಾ ಕಣ್ಣಂಚು ಮಿಂಚುತಿರಲಿ
ಗೆಲುವಿನಲಿ ಹೊಂಬಣ್ಣವುಕ್ಕುತಿರಲಿ
ಮಲ್ಲಿಗೆಯ ಲತೆಯೊಂದು
ಬಳುಕುತಲಿ ತಾ ನಿಂದು
ಬೆಳ್ಳಿಯಂದವ ಹೊತ್ತು ನಿಲ್ಲುವಂತೆ
ಎಲ್ಲೆಲ್ಲು ಪರಿಮಳವ ಚೆಲ್ಲುವಂತೆ
ಸೊಲ್ಲು ಸೊಲ್ಲಲಿ ಬಾಗಿ
ಕಲ್ಲೆದೆಯ ಒಳ ತಾಕಿ
ಪಲ್ಲವಿಸಿ ಮೈದುಂಬಿ ನಳನಳಿಸಲಿ
ಸೆಳವಿತ್ತು ಮನತುಂಬ ಹಬ್ಬುತಿರಲಿ
ಕಾಲಗಳ ಅರಿವಿರದೆ
ಸೋಲುಗಳ ಸುಳಿವಿರದೆ
ಒಲವ ಬಲವದು ತುಂಬಿ ತುಳುಕುತಿರಲಿ
ಬಾಳಿನಂಗಳದಲ್ಲಿ ಹರಡುತಿರಲಿ
ಡಿ.ನಂಜುಂಡ
25/02/2014