ಶುಕ್ರವಾರ, ಫೆಬ್ರವರಿ 14, 2014

ಛಂದೋಮಯವೀ ಸೃಷ್ಟಿನಿಬಂಧವುಛಂದೋಮಯವೀ ಸೃಷ್ಟಿನಿಬಂಧವು
ಅತಿಶಯ ಸುಂದರನಂದನವು
ಸಂಧ್ಯಾರಾಗವು ಮಂದಸಮೀರವು
ಸರ್ವವು ಕಾವ್ಯಾಮೃತಹಿತವು

ಚೈತ್ರೋದ್ಯಾನದ ವನಕವಿಗೋಷ್ಠಿಯ
ಕೋಕಿಲಕಲರವ ಗಾಯನವು
ಶ್ರಾವಣವೃಷ್ಟಿಯ ತಟತಟ ತಾಳಕೆ
ನವಿಲ ಮನೋಹರ ನರ್ತನವು

ಕಾಯಕಯೋಗೀ ಕಾಕಾರವದಲಿ
ಆವರ್ತಿತ ಗುಣಿತಾಕ್ಷರವು
ಶ್ವಾನಾನನದಾ ಬೌಬೌಕಾರದಿ
ನಿಯಮಿತ ಗತಿಪದಸಂಪದವು

ಮರ್ಕಟಕಂಪಿತ ನಾನಾಶಾಖಾ
ಫಲಗಳ ಪತನದ ರಪರಪವು
ವನಚರಚಾಲಿತ ತರುತಲಹಾಸಲಿ
ಶ್ರುತಿಹಿತ ಪರಪರ ಸಹಜತೆಯು

ಪ್ರಕೃತಿವಿಘೋಷಿತ ನಾನಾವೃತ್ತದಿ
ವಿಧವಿಧ ಸ್ವರಗಳ ಪ್ರಜನನವು
ಏಕಾಕ್ಷರದಾ ನಾದತರಂಗವು
ಕವಿಮುಖವೈಖರಿವಲ್ಲರಿಯು

ಡಿ.ನಂಜುಂಡ
14/02/2014


2 ಕಾಮೆಂಟ್‌ಗಳು:

  1. ಪ್ರಕೃತಿಯ ಪ್ರತಿ ಶಬ್ದದಲ್ಲೂ ಒಂದು ಮಾಧುರ್ಯದ ದನಿಯನು ಕೇಳುವ, ಆಲಿಸು ಪ್ರತಿಕ್ರಯಿಸುವ ಕವಿಮನಕ್ಕೆ ನಮೋ ನಮಃ

    ಪ್ರತ್ಯುತ್ತರಅಳಿಸಿ