ಮಂಗಳವಾರ, ಫೆಬ್ರವರಿ 11, 2014

ಬಂಧವಿಲ್ಲದ ಪ್ರೇಮ



ಬಂಧವಿಲ್ಲದ ಒಲವು ಮೌನಘನವಾಗಿರಲು
ಮಾತೇಕೆ ಬೇಕೆಮಗೆ 'ಪ್ರೇಮಿಸುವೆ' ಎಂದು
ಮತಿಯ ಚಾತುರ್ಯಗಳ ಬಯಲಿನಲಿ ಕಿತ್ತೊಗೆದು
ಜಗದೊಲವನÀರಿಯೋಣ ಸ್ಥಿರವಾಗಿ ನಿಂದು

ಮಣ್ಣ ಸಾರವ ಸೆಳೆದು ಮರದೆಲೆಗೆ ಉಣಿಸುತಿಹ
ಬೇರು ತಾ ಹೇಳದದು 'ಪ್ರೀತಿಸುವೆ' ಎಂದು
ಹಣ್ಣೆಲೆಯು ನೆಲಕುದುರಿ ಬೇರ ತಳಕಿಳಿವಾಗ
ಮಮತೆಯಲಿ ಕೇಳುವುದೆ 'ನೀನಾರ ಬಂಧು?'

ಮೋಡಗಳು ನೀರ್ಗರೆದು ಶಾಂತವಾಗುವ ಹಾಗೆ
ಒಪ್ಪಿಸುತ ಪ್ರೇಮವನು ಹಗುರಾಗೆ ನಾವು
ಪ್ರಕೃತಿಯಲಿ ಪಸರಿಸಿಹ ತತ್ತ್ವವದು ಹರಿವಾಗಿ
ನಮ್ಮೊಳಗೆ ನಿಲ್ಲುವುದು ನಿಶ್ಚಲದ ಅರಿವು

ನಮ್ಮೊಲವ ಧಾರೆಯದು ಪ್ರಕೃತಿಯಲಿ ಒಂದಾಗಿ
ಲತೆಯಂತೆ ಚಿಗುರುತಲಿ ಫಲದೊಳಗೆ ಬರಲಿ
ಮುಗುಳೊಂದು ಕಾಯ್ಕಟ್ಟಿ ತೊಟ್ಟು ಕಳಚುವ ಹಾಗೆ
ಮಾತೆಲ್ಲ ಮುಗಿದಂತೆ ಶಿವವಾಗಿ ನಿಲಲಿ

ಜಾತಿಮತಪಂಥಗಳ ಎಲ್ಲೆಯನು ಮೀರುತಲಿ 
ಸೃಷ್ಟಿಸಹಜದ ಪ್ರೇಮವವತರಿಸಿ ಬರಲಿ
ಚಿತ್ತಾಭಿಷೇಕದಲಿ ನಿತ್ಯವದನರ್ಚಿಸುತ
ಸತ್ಯಸುಂದರಜಗಕೆ ಮನವನÀರ್ಪಿಸಲಿ.

ಡಿ.ನಂಜುಂಡ
11/02/2014



2 ಕಾಮೆಂಟ್‌ಗಳು: