ಬುಧವಾರ, ಫೆಬ್ರವರಿ 12, 2014

ಒಕ್ಕಲಾಟ



ಚಿಕ್ಕವರ ಎದೆಯೊಳಗೆ ಹೊಕ್ಕಿರುವ ಪದವೊಂದು
ಉಕ್ಕಿರುವ ನಗೆಯಲ್ಲಿ ಹಾಡಾಗಬೇಕು
ಅಕ್ಕರೆಯ ಮಾತುಗಳು ಮಾಧುರ್ಯದರಳಾಗಿ
ಪಕ್ಕವಾದ್ಯದ ಲಯಕೆ ಪುಟಿಯುತಿರಬೇಕು

ಹಕ್ಕಿಯುದರದಿ ಬೆಂದ ಹಣ್ಣಿನಾ ಬೀಜವದು
ಹಿಕ್ಕೆಯಲಿ ನೆಲಕುದುರಿ ಮರವಾಗಬೇಕು
ಅಕ್ಕಿಸಿಪ್ಪೆಯು ಬಿಟ್ಟ ಕಲಗಚ್ಚ ತಾ ಕುಡಿದು
ಚೊಕ್ಕ ಹಾಲನು ಹಸುವು ಸುರಿಸುತಿರಬೇಕು

ಒಕ್ಕಲಿಗ ತಾನುತ್ತು ಬೆಳೆದ ಧಾನ್ಯವನೊಕ್ಕಿ
ತಕ್ಕ ರೊಕ್ಕವ ಗಳಿಸಿ ಸುಖಿಯಾಗಬೇಕು
ಕೊಕ್ಕಿನಲಿ ಕಾಳುಗಳನಿಕ್ಕುತಲಿ ಮರಿಗಳಿಗೆ
ಮಿಕ್ಕುದನು ತಾನುಣುವ ಖಗವಾಗಬೇಕು

ಸಿಕ್ಕಸಿಕ್ಕೆಡೆಗಳಲಿ ಬೆಳಕ ಬಾಣವನೆಸುದು
ರಕ್ಕಸರನಟ್ಟಿಸುವ ರವಿಯಾಗಬೇಕು
ಉಕ್ಕುತಿಹ ಭಾವದಲಿ ಚಂದ್ರಬಿಂಬವು ಹೊಕ್ಕು
ಸೊಕ್ಕುತಲಿ ಹುಣ್ಣಿಮೆಯ ಸುಧೆಯಾಗಬೇಕು.

ಡಿ.ನಂಜುಂಡ
12/02/2014

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ