ಶನಿವಾರ, ಫೆಬ್ರವರಿ 15, 2014

ನಲ್ಲೆಯೊಲವು
ನಲ್ಲೆಯೊಲವಿನ ಜಲಧಿಯಲೆಯಲಿ
ಮೆಲ್ಲಮೆಲ್ಲನೆ ತೇಲುತ
ಚೆಲ್ಲಿತೆನ್ನೆದೆಯೊಳಗ ಭಾವವು
ಗಲ್ಲಕೋಕುಳಿಯೆರಚುತ

ನಲಿವ ನೊರೆಗಳ ಮೇಲಕೇರಿಸಿ
ಬಿಳಿಯ ನಗುವನು ಬಿಂಬಿಸೆ
ಬಾಳ ಬಾನಲಿ ಕೆಳಕೆ ಬಾಗಿಸಿ
ಏಳು ಬಣ್ಣಗಳೇಳಿಸೆ

ಸೋಲಿನಲೆಯಲಿ ಛಲವ ತುಂಬಿಸಿ
ಗೆಲುವ ಮೆಟ್ಟಿಲಿಗೇರಿಸೆ
ಕಲ್ಲ ಹೃದಯದಿ ಸೊಲ್ಲನಿಂಗಿಸಿ
ಚೆಲುವಿನೊರತೆಯ ಚಿಮ್ಮಿಸೆ

ಎಲ್ಲೆಯಿಲ್ಲದ ನಲ್ಲೆಯೊಲವಿಗೆ
ಸಲ್ಲಲೆನ್ನಯ ಸರ್ವವು
ಕಳೆದೆನೆಂಬುದು ಕಳಚಿ ಹೋಗಲಿ
ನಿಲ್ಲಲೆದೆಯಲಿ ಶೂನ್ಯವು

ಡಿ.ನಂಜುಂಡ
16/02/20142 ಕಾಮೆಂಟ್‌ಗಳು: