ಶನಿವಾರ, ಫೆಬ್ರವರಿ 8, 2014

ಬಾರೋ ವಸಂತ



ಸುಮಸಮಸುಂದರ ಪದಬಂಧದ ಕಲಕಂಠದ ವನಘಂಟಾಧ್ವಾನ
ಚೈತ್ರೋದ್ಯಾನದಿ ಪ್ರೇಮೋತ್ಸವರತ ವಸಂತದೇವಗಿದಾಹ್ವಾನ

ಬಾರೋ ಲತೆಗಳ ಮಂಟಪ ಮಧ್ಯಕೆ ರಸನೈವೇದ್ಯದ ಸ್ವಾದನೆಗೆ
ಪೂರ್ವದಿಗಂತದ ನವಾರುಣೋದಯ ಕಿರಣೋಪಮ ಮನವಿಕಸನಕೆ

ಗಿರಿಕಟಿಯಟವಿಯ ನದೀವಿಹಾರಕೆ ಸ್ವಾದೂದಕಸಂಪ್ರಾಶನಕೆ
ಜಲತಾಡನದಾ ಕೇಲಿಯ ತುಷ್ಟಿಗೆ ಭಾವೋಲ್ಲಾಸದ ಕರ್ಷಣೆಗೆ

ಬಾ ತರುಶಾಖೆಗೆ ಬಾ ತರುಮೂಲಕೆ ನಾನಾವಿಧಫಲಭೋಜನಕೆ
ಪಂಚವಟೀತಟ ಪರ್ಣಕುಟೀರಕೆ ಶೃಂಗಾರರ್ಷಿಗಳಾಶ್ರಮಕೆ

ನವತಾರುಣ್ಯದ ಹೃದಯಸರೋಜಕೆ ಬಾರೋ ಮಧುಸಂಪೋಷಣೆಗೆ
ಜೀವನಯಾತ್ರಾಪಥಸಂಕ್ರಮಣಕೆ ಆನಂದಾಮೃತವಿತರಣೆಗೆ.

ಡಿ.ನಂಜುಂಡ
09/02/2014

2 ಕಾಮೆಂಟ್‌ಗಳು:

  1. ಉತ್ಕಟ ಪ್ರೇಮೋತ್ಕರ್ಷದ ಸುಂದರ ಭಾವಸ್ಪುರಣೆ.ಭಾವ ತಾಳ ಲಯಗಳು ಲಹರಿಗೊಂಡು ಸುಂದರ ರಸಾಸ್ವಾದನೆಗೆ ಇಂಬುಕೊಟ್ಟ ಕವಿತೆ ಇದು.ಪ್ರೇಮಲಾಲಿತ್ಯದ ಸುಮಧುರ ಗಾನವೇ ಈ ಗೀತೆ.ಕವಿಭಾವವನ್ನು ಅರ್ಥೈಸಿ ಅಭಿಪ್ರಾಯಿಸಲು ಅತ್ಯಂತ ಸಣ್ಣವನು ಎನಿಸುತ್ತದೆ.ಓದಿ ಆಸ್ವಾದಿಸಿ ಆನಂದಿಸುವ ಭಾಗ್ಯ ಮಾತ್ರವೇ ನಮ್ಮದು.

    ಪ್ರತ್ಯುತ್ತರಅಳಿಸಿ
  2. ಪ್ರೋತ್ಸಾಹಿಸುವ ನಿಮ್ಮ ಗುಣಕ್ಕೆ ನಾನು ಕೃತಜ್ಞ Banavasi Somashekhar

    ಪ್ರತ್ಯುತ್ತರಅಳಿಸಿ