ಮಂಗಳವಾರ, ಫೆಬ್ರವರಿ 25, 2014

ಒಲವ ರೂಪಚಂದ್ರಿಕೆಇಳಿದು ಬರಲಂಗಳಕೆ
ಒಲವ ರೂಪಚಂದ್ರಿಕೆ
ಮಳೆಯಂತೆ ಎದೆಮಣ್ಣೊಳಿಂಗುತಿರಲಿ
ನಲಿವಾಗಿ ಮೊಳೆತೆದ್ದು ಚಿಗುರುತಿರಲಿ

ಬಾಳ ಬಾನನು ಬೆಳಗಿ
ಬೆಳಕನೀಯುತ ಬೀಗಿ
ನಲ್ಲೆಯಾ ಕಣ್ಣಂಚು ಮಿಂಚುತಿರಲಿ
ಗೆಲುವಿನಲಿ ಹೊಂಬಣ್ಣವುಕ್ಕುತಿರಲಿ

ಮಲ್ಲಿಗೆಯ ಲತೆಯೊಂದು
ಬಳುಕುತಲಿ ತಾ ನಿಂದು
ಬೆಳ್ಳಿಯಂದವ ಹೊತ್ತು ನಿಲ್ಲುವಂತೆ
ಎಲ್ಲೆಲ್ಲು ಪರಿಮಳವ ಚೆಲ್ಲುವಂತೆ

ಸೊಲ್ಲು ಸೊಲ್ಲಲಿ ಬಾಗಿ
ಕಲ್ಲೆದೆಯ ಒಳ ತಾಕಿ
ಪಲ್ಲವಿಸಿ ಮೈದುಂಬಿ ನಳನಳಿಸಲಿ
ಸೆಳವಿತ್ತು ಮನತುಂಬ ಹಬ್ಬುತಿರಲಿ

ಕಾಲಗಳ ಅರಿವಿರದೆ
ಸೋಲುಗಳ ಸುಳಿವಿರದೆ
ಒಲವ ಬಲವದು ತುಂಬಿ ತುಳುಕುತಿರಲಿ
ಬಾಳಿನಂಗಳದಲ್ಲಿ ಹರಡುತಿರಲಿ

ಡಿ.ನಂಜುಂಡ
25/02/2014

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ