ಪಲ್ಲವಿಸು ಹೇ ಪೃಕೃತಿ! ಸೊಲ್ಲುಸೊಲ್ಲುಗಳಲ್ಲಿ
ಮೊಲ್ಲೆ ಬಳ್ಳಿಯು ಹರಹಿ ಹಬ್ಬುವಂತೆ
ಕಲ್ಲುಮುಳ್ಳುಗಳರ್ಥಸುಮಗಂಧದೊಳು ಬೆಸೆದು
ಚೆಲ್ಲಾಟವಾಡುತ್ತ ಕುಣಿಯುವಂತೆ
ಚಿತ್ತೈಸು ಹೇ ಪ್ರಕೃತಿ! ಚಿದ್ರೂಪತನುವಾಗಿ
ತತ್ತ್ವಾರ್ಥಭಾವದೊಳು ನಿತ್ಯವಾಗಿ
ಸತ್ಯಾತ್ಮದಾನಂದಪದಬಂಧರತಿಯಾಗಿ
ಮಿಥ್ಯಗೋಚರದಿಂದ ಮುಕ್ತವಾಗಿ
ಅಂತರಂಗದ ಮೌನ ತಾನನಂತದಿ ಬಾಗಿ
ಸಂತತವು ವಾಕ್ಕಾಯರೂಪವಾಗು
ಶಾಂತತೆಯ ಸೊಬಗಾಗುವಂತೆ ನೀನೆಲೆ ಪ್ರಕೃತಿ!
ಚಿಂತನೆಯ ಚಿತ್ರದೊಳ ಜೀವವಾಗು
ಡಿ.ನಂಜಂಡ
28/12/2017