ಬುಧವಾರ, ಜನವರಿ 29, 2014

ಸ್ಥವಿರಗಿರಿಯ ಚಲಿತ ಭಾವ!



ಹೇಗೆ ಹೊರಟಿತು ಸ್ಥವಿರಗಿರಿಯಲಿ
ಸುಗಮಭಾವಸುಕೀರ್ತನ?
ಬಳುಕಿ ಬಾಗುತ ಸಾಗಿತೇಕದು
ಕಳೆದುಕೊಳ್ಳಲು ಮೈಮನ?

ಹಾಡಿ ನರ್ತಿಸಿ ಕೀರ್ತಿ ಗಳಿಸಿತು
ನಾಡ ನೆಲದಲಿ ಬಿಮ್ಮನೆ
ಜಲಧಿಯಲೆಯಲಿ ತನ್ನ ಹೆಸರನು
ಕಳೆಯಿತೇಕದು ಸುಮ್ಮನೆ?

ಮೌನತಳದಲಿ ಗಾನವಡಗಲು
ಲೀನಗೊಂಡಿತೆ ಭಾವವು?
ತನ್ನ ತನವನು ಕಳಚುತೆಲ್ಲವು
ಬಾನಿಗೇರಿತೆ ಆತ್ಮವು?

ಮತ್ತೆ ಮಳೆಯಲಿ ಬುವಿಗೆ ಇಳಿಯಿತೆ?
ಮತ್ತೆ ಜೀವಕೆ ಚಲನೆಯೆ?
ಮತ್ತೆ ಜನನವೆÀ ಮತ್ತೆ ಮರಣವೆ?
ಮತ್ತೆ ಬಸಿರೊಳು ಶಯನವೆ?

ಡಿ.ನಂಜುಂಡ
29/01/2014

ಶನಿವಾರ, ಜನವರಿ 25, 2014

ಮಲ್ಲಿಗೆಯರಳಿದಾಗ!



ಮಲ್ಲಿಗೆಯ ಲತೆಯೊಂದು ಬಳುಕುತಲಿ ಅಂಗಳದಿ
ಬೆಳ್ಳಿಬೆಳಕಿನ ಚೆಲುವ ರಸವ ಕುಡಿದು
ಗೆಲ್ಲು ಗೆಲ್ಲಲು ಬಾಗಿ ಪಲ್ಲವಿಸಿ ಮೈದುಂಬಿ
ಕಲ್ಲ ಚಪ್ಪರವೇರಿ ನಲಿಯುತಿರಲು

ಮರಮರದ ಚಿಗುರುಗಳ ತರತರದಿ ಚುಂಬಿಸುತ
ಸರಸರನೆ ತಂಬೆಲರು ಬೀಸಿ ಬಂದು
ಅರೆಬಿರಿದ ಅಲರುಗಳ ಪರಿಮಳವÀ ತಾ ಹೊತ್ತು
ಹೊರಳುತಿರೆ ಕಿಟಕಿಯೊಳು ಒಳಗೆ ನುಸುಳಿ

ಅಲ್ಲಿ ಮೈಕುಲುಕುತಲಿ ಮೆಲ್ಲನೆದ್ದಳು ನಲ್ಲೆ
ಬಳ್ಳಿ ತಾ ಕುಸುಮಿಸಿದೆ ಎಂದು ತಿಳಿದು
ಒಲವಿನಂಜಲಿಯಲ್ಲಿ ಗೆಲುವು ತುಂಬಿದ ಹಾಗೆ
ಪಲುಕೊಂದ ಗುನುಗುನುಸಿ ಹೊರಬಂದಳು

ಅರಳಿರುವ ಹೂವುಗಳ ಸರಿದ ಎಸಳುಗಳಲ್ಲಿ
ಉರುಳುರುಳಿ ಹರಡುತಿರೆ ಬೆಳ್ಳಿಬೆಡಗು
ತಾರೆಯೇ ಬುವಿಗಿಳಿದು ಬಿರಿದಂತೆ ತೋರುತಿರೆ
ಮೇರೆಯಿಲ್ಲದ ಒನಪು ನನ್ನವಳದು

ಹೂವಿನಾ ಅಂದವದು ಹಾವಭಾವಕೆ ಸೋಕಿ
ಜೀವನದ ಚೈತ್ರದಲಿ ಬಣ್ಣ ಸುರಿಯೆ
ಯಾವುದೋ ನೆವದಲ್ಲಿ ಯಾವುದೋ ಶರವೊಂದು
ನವುರಾಗಿ ನನ್ನೆದೆಗೆ ತಾಕಿದಂತೆ

ಡಿ.ನಂಜುಂಡ
25/01/2014

ಭಾನುವಾರ, ಜನವರಿ 19, 2014

ಸುಂದರವೀ ಶಿವಸಂಸಾರ!



ಸುಂದರವೀ ಶಿವಸಂಸಾರ
ಆನಂದಸುಧಾಘನಸಾರ

ಮನಕಾನನದಲಿ ಮತಿಶಿವೆಯೊಂದಿಗೆ
ಪಂಚೇಂದ್ರಿಯಮೃಗಪರಿವಾರ
ಪಂಚಪ್ರಾಣಾವೃತತನುಮಂದಿರ-
ಕೋಣಾಂತರ್ಯದಿ ಸುವಿಹಾರ

ನಿರ್ಮಲಚಿತ್ತಸರೋವರಪರಿವೃತ
ಹೃದಯಸರೋಜದಿ ಮಧುಪೂರ
ಪ್ರಣವಾಕ್ಷರಸಂಘೋಷಿತ ವದನದಿ
ವಿಕಸಿತ ಸ್ವರಸುಮಮಂದಾರ

ಭವಭಯಹರಶಿವತಾಂಡವನೃತ್ಯಕೆ
ಲಲಿತಾಪದಗತಿಶೃಂಗಾರ
ಭಾವರಥೋತ್ಸವ ಮಂಗಲಗಾನಕೆ
ಶ್ರುತಿಹಿತ ಸರಿಗಮಸಂಚಾರ

ಅನಂತಮೌನದ ನಾಟ್ಯತರಂಗವೆ
ವ್ಯೋಮಾಂತರ್ಗತದೋಂಕಾರ
ಅಚಲಿತ ಧ್ಯಾನಾವಸ್ಥಿತ ಜೀವಕೆ
ಅದ್ವೈತಾಮೃತಸುಖಸಾರ

ಡಿ.ನಂಜುಂಡ
19/01/2014



ಮಂಗಳವಾರ, ಜನವರಿ 14, 2014

ನಿನ್ನೊಲವಿನೊಳು ನಾನು



ಹೊನಲಂತೆ ರಭಸದಲಿ ಹರಿಯುತಿರೆ ನಾನು
ಮೌನದಲಿ ಸೆಳೆಯುತಿಹೆ ಕಡಲಂತೆ ನೀನು

ಒಲವ ಜಲಧಿಯ ಸೇರಿ ಕಳೆಯುವೆನು ನನ್ನತನ
ತಿಳಿಗೊಳಿಸು ಎದೆಯೊಳಗ ಬಣ್ಣವನು ಬೇಗ.
ಕಳೆಯಂತೆ ನಾ ತಂದ ಬೇಡಗಳ ಒಗೆದುಬಿಡು
ಅಲೆಯ ಬಲದಲಿ ನೀನು ತೀರದೆಡೆಗಾಗ

ಝರಿಯು ಭೋರ್ಗರೆಯುವುದು ಗುರಿಯು ಮುಂದಿರಲು
ಶರಧಿಯೊಳು ಒಂದಾಗೆ ತನ್ನತನ ಕಳೆದು;
ಶರಣಾಗಿ ಹಗುರಾಗಿ ಹರಹಾಗಿ ಬೆರತಂತೆ
ಕರಗುವೆನು ನಿನ್ನೊಡಲ ಪ್ರೀತಿಯೊಳಗಿಳಿದು.

ಗರಿಮೆಯಾ ಸುಳಿಯೊಳಗೆ ಸಿಲುಕಿ ನಲುಗಿದ ಕೀರ್ತಿ
ಹರಳಾಗಿ ಮರಳಂತೆ ತಾ ದಡದೊಳಿರಲು;
ಭರತದಲಿ ಸೆಳೆದದನು ಮುತ್ತಾಗಿ ಮಾರ್ಪಡಿಸಿ
ಧರಿಸುತಿಹೆ ನತ್ತಂತೆ ಹೊಳಪೀಯುತಿರಲು.

ಸುಪ್ತ ಸ್ಮøತಿಯಲಿ ಉಳಿದ ಗುಪ್ತ ಬಯಕೆಗಳೆಲ್ಲ
ತಪ್ತಾಗ್ನಿ ಜ್ವಾಲೆಯಲಿ ಮೇಲೇರುತಿರಲು;
ಪತನವಾಗಲಿ ಕೆಳಗೆ ಬುವಿಗಿಳಿವ ಮಳೆಯಂತೆ
ತಪವಗೈಯಲಿ ಮತ್ತೆ ನಿನ್ನೆಡೆಗೆ ಬರಲು.

ಡಿ.ನಂಜುಂಡ
15/01/2013