ಸೋಮವಾರ, ಜನವರಿ 13, 2014

ಬಾ ರವಿಪಥಸಂಕ್ರಮಣಕ್ರಮದಲಿಬಾ ರವಿಪಥಸಂಕ್ರಮಣಕ್ರಮದಲಿ
ಮೃದುಲ ನವೋದಯ ಪದವಿರಿಸಿ
ಮಾತಿನ ಮಿತಿಯನು ಮೀರದ ಗತಿಯಲಿ
ಅನುದಿನ ಮತಿಯನು ಸಂಸ್ಕರಿಸಿ.

ಸೃಷ್ಟಿನಿಬಂಧದ ನಿಯಮಾವಳಿಯಲಿ
ಹೂವೆಲೆಕಾಯ್ಗಳ ನೀನೆಣಿಸಿ
ನವಿಲಿನ ನರ್ತನವೆದೆಯೊಳು ಬಿಂಬಿಸಿ
ಕೊರಳಿನ ರವದಲಿ ಕಲವಿರಿಸಿ.

ಗಂಧವ ತೀಡಿದ ಮಂದಸಮೀರವ
ಸೋಕಿಸಿ ತನುವಲಿ ಹುರುಪಿರಿಸಿ
ಹಸಿರೆಲೆಯುಸಿರನು ಸ್ವರಗಳಲಿರಿಸುತ
ಅಕ್ಷರದುದರದಿ ಅಂಕುರಿಸಿ

ಕತ್ತಲೆಯರೆದಿಹ ನೀಲಾಂಜನದಲಿ
ಕಣ್ಣಿನ ಬಿಲ್ಲನು ಹುರಿಗೊಳಿಸಿ
ಕಾಂತಿಯ ಶರವನು ದೃಷ್ಟಿಗೆ ಜೋಡಿಸಿ
ಶಾಂತಿಯ ಬೆಳಕಿಗೆ ಗುರಿಯಿರಿಸಿ

ಸೂರ್ಯನ ಕ್ರಮಣದಿ ಚಂದ್ರನ ಭ್ರಮಣದಿ
ಕಾಲವು ಗಣಿತದ ಗತಿಯಿರಿಸೆ
ವಿಧವಿಧ ಬಣ್ಣವ ಸುಮದೊಳು ಯೋಜಿಸೆ
ಅಳತೆಗೆ ಮೀರದ ಹದವಿರಿಸಿ.

ಸರಸರ ರಸನಕೆ ಬಾ ಬಾ ಸರಸತಿ!
ತರತರದಭಿನವ ನುಡಿಯಿರಿಸಿ
ನಿಯತದ ನಿಯಮದಿ ಮನಸನು ಬಂಧಿಸಿ
ಆಸೆಯ ಕುದುರೆಗೆ ಗೆರೆಯಿರಿಸಿ


ಡಿ.ನಂಜುಂಡ
14/01/2014


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ