ಶನಿವಾರ, ಜನವರಿ 4, 2014

ನೀಲಮೇಘಶ್ಯಾಮ ಕೃಷ್ಣ!
ನೀಲಮೇಘಶ್ಯಾಮ ಕೃಷ್ಣ!
ಬಾಲಲೀಲೆಯಾಡು ಬಾ.
ಮೆಲ್ಲ ಮೆಲ್ಲನಿರಿಸಿ ಹೆಜ್ಜೆ
ಮೆಲ್ಲುತ ನವನೀತವ.

ಕೊಳಲ ದನಿಯ ಅಲೆಯಲೆಗಳ
ತೇಲಿ ಬಿಟ್ಟು ಕರಣದೊಳಗೆ
ಮೊಳಗಿ ಎದೆಯ ಭಾವಗಳಲಿ
ಪಲುಕುಗಳನು ಚೆಲ್ಲಿ ಹರಹಿ

ನೀಲಮೇಘಶ್ಯಾಮ ಕೃಷ್ಣ!
ಬಾಲಲೀಲೆಯಾಡು ಬಾ.
'ನಾನು' ಎಂಬ ವಿಷದ ಹಾವು
ಮನವ ಸುತ್ತಿ ಮೆರೆಯುತಿರಲು
ಗೋಣ ತುಳಿದು ದರ್ಪವಿಳಿಸಿ
ವಿನಯವೆರೆದು ಪೊರೆಯ ತೆಗೆದು 

ನೀಲಮೇಘಶ್ಯಾಮ ಕೃಷ್ಣ!
ಬಾಲಲೀಲೆಯಾಡು ಬಾ.
ಗಿರಿಯ ಹಾಗೆ ಭಾರ ತಳೆದ
ಗರುವ ಮತಿಯ ಹಗುರಗೊಳಿಸಿ
ಕಿರುಬೆರಳಲಿ ಮೇಲಕೆತ್ತಿ
ಕರುಣೆಯಿಂದ ನೆರಳ ನೀಡಿ

ನೀಲಮೇಘಶ್ಯಾಮ ಕೃಷ್ಣ!
ಬಾಲಲೀಲೆಯಾಡು ಬಾ.

ಡಿ.ನಂಜುಂಡ
04/01/2014
ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ