ಮಲ್ಲಿಗೆಯ ಲತೆಯೊಂದು ಬಳುಕುತಲಿ ಅಂಗಳದಿ
ಬೆಳ್ಳಿಬೆಳಕಿನ ಚೆಲುವ ರಸವ ಕುಡಿದು
ಗೆಲ್ಲು ಗೆಲ್ಲಲು ಬಾಗಿ ಪಲ್ಲವಿಸಿ ಮೈದುಂಬಿ
ಕಲ್ಲ ಚಪ್ಪರವೇರಿ ನಲಿಯುತಿರಲು
ಮರಮರದ ಚಿಗುರುಗಳ ತರತರದಿ ಚುಂಬಿಸುತ
ಸರಸರನೆ ತಂಬೆಲರು ಬೀಸಿ ಬಂದು
ಅರೆಬಿರಿದ ಅಲರುಗಳ ಪರಿಮಳವÀ ತಾ ಹೊತ್ತು
ಹೊರಳುತಿರೆ ಕಿಟಕಿಯೊಳು ಒಳಗೆ ನುಸುಳಿ
ಅಲ್ಲಿ ಮೈಕುಲುಕುತಲಿ ಮೆಲ್ಲನೆದ್ದಳು ನಲ್ಲೆ
ಬಳ್ಳಿ ತಾ ಕುಸುಮಿಸಿದೆ ಎಂದು ತಿಳಿದು
ಒಲವಿನಂಜಲಿಯಲ್ಲಿ ಗೆಲುವು ತುಂಬಿದ ಹಾಗೆ
ಪಲುಕೊಂದ ಗುನುಗುನುಸಿ ಹೊರಬಂದಳು
ಅರಳಿರುವ ಹೂವುಗಳ ಸರಿದ ಎಸಳುಗಳಲ್ಲಿ
ಉರುಳುರುಳಿ ಹರಡುತಿರೆ ಬೆಳ್ಳಿಬೆಡಗು
ತಾರೆಯೇ ಬುವಿಗಿಳಿದು ಬಿರಿದಂತೆ ತೋರುತಿರೆ
ಮೇರೆಯಿಲ್ಲದ ಒನಪು ನನ್ನವಳದು
ಹೂವಿನಾ ಅಂದವದು ಹಾವಭಾವಕೆ ಸೋಕಿ
ಜೀವನದ ಚೈತ್ರದಲಿ ಬಣ್ಣ ಸುರಿಯೆ
ಯಾವುದೋ ನೆವದಲ್ಲಿ ಯಾವುದೋ ಶರವೊಂದು
ನವುರಾಗಿ ನನ್ನೆದೆಗೆ ತಾಕಿದಂತೆ
ಡಿ.ನಂಜುಂಡ
25/01/2014
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ