ಬುಧವಾರ, ಜನವರಿ 1, 2014

ಶರಣು ತ್ರಿಪುರಾಂತಕಿಯೆ!ಶರಣು ತ್ರಿಪುರಾಂತಕಿಯೆ! ವಿಶ್ವಾದಿ ಮಾಯೆ
ಹರಭಾವನರ್ತಕಿಯೆ ಹರಸೆನ್ನ ತಾಯೆ

ಅರಿಗಳಾರನು ಮಣಿಸಿ ಮಮಕಾರವಳಿಸಿ
ಪರಿತಾಪಗಳನೆಲ್ಲ ಕ್ಷಣದಿ ಪರಿಹರಿಸಿ
ವರವನೆರೆಯುತ ಸದಾ ಹೃದಯವನರಳಿಸಿ
ಪುರದೊಳಗೆ ಪವಡಿಸುತ ಪರಮಸುಧೆಯುಣಿಸಿ

ನಿನ್ನ ಇರವನು ಉಸಿರ ಕಣಕಣದಿ ಉಳಿಸಿ
ನನ್ನ ಅರಿವಲಿ ಅದನು ಸಂತತವು ಹರಿಸಿ
ಅನ್ನಮಯದಾನಂದಪದದಿ ಪಲ್ಲವಿಸಿ
ಅನವರತ ನಾದಾನುಸಂಧಾನಫಲಿಸಿ

ಭವರೋಗಭಿಷಜಾಕ್ಷಿದೀಪಪ್ರಜ್ವಲಿಸಿ
ಭಾವಾಂತರಂಗದಲಿ ನಿತ್ಯವವತರಿಸಿ
ಜೀವಾತ್ಮವನನಂತದೇಕಾತ್ಮಗೊಳಿಸಿ
ದೇವಿ! ನಿನ್ನಯ ಕೃತಿಯ ತೋರು ಕೃಪೆಯಿರಿಸಿ

ಡಿ.ನಂಜುಂಡ
01/01/2014

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ