ಮಂಗಳವಾರ, ಜನವರಿ 14, 2014

ನಿನ್ನೊಲವಿನೊಳು ನಾನು



ಹೊನಲಂತೆ ರಭಸದಲಿ ಹರಿಯುತಿರೆ ನಾನು
ಮೌನದಲಿ ಸೆಳೆಯುತಿಹೆ ಕಡಲಂತೆ ನೀನು

ಒಲವ ಜಲಧಿಯ ಸೇರಿ ಕಳೆಯುವೆನು ನನ್ನತನ
ತಿಳಿಗೊಳಿಸು ಎದೆಯೊಳಗ ಬಣ್ಣವನು ಬೇಗ.
ಕಳೆಯಂತೆ ನಾ ತಂದ ಬೇಡಗಳ ಒಗೆದುಬಿಡು
ಅಲೆಯ ಬಲದಲಿ ನೀನು ತೀರದೆಡೆಗಾಗ

ಝರಿಯು ಭೋರ್ಗರೆಯುವುದು ಗುರಿಯು ಮುಂದಿರಲು
ಶರಧಿಯೊಳು ಒಂದಾಗೆ ತನ್ನತನ ಕಳೆದು;
ಶರಣಾಗಿ ಹಗುರಾಗಿ ಹರಹಾಗಿ ಬೆರತಂತೆ
ಕರಗುವೆನು ನಿನ್ನೊಡಲ ಪ್ರೀತಿಯೊಳಗಿಳಿದು.

ಗರಿಮೆಯಾ ಸುಳಿಯೊಳಗೆ ಸಿಲುಕಿ ನಲುಗಿದ ಕೀರ್ತಿ
ಹರಳಾಗಿ ಮರಳಂತೆ ತಾ ದಡದೊಳಿರಲು;
ಭರತದಲಿ ಸೆಳೆದದನು ಮುತ್ತಾಗಿ ಮಾರ್ಪಡಿಸಿ
ಧರಿಸುತಿಹೆ ನತ್ತಂತೆ ಹೊಳಪೀಯುತಿರಲು.

ಸುಪ್ತ ಸ್ಮøತಿಯಲಿ ಉಳಿದ ಗುಪ್ತ ಬಯಕೆಗಳೆಲ್ಲ
ತಪ್ತಾಗ್ನಿ ಜ್ವಾಲೆಯಲಿ ಮೇಲೇರುತಿರಲು;
ಪತನವಾಗಲಿ ಕೆಳಗೆ ಬುವಿಗಿಳಿವ ಮಳೆಯಂತೆ
ತಪವಗೈಯಲಿ ಮತ್ತೆ ನಿನ್ನೆಡೆಗೆ ಬರಲು.

ಡಿ.ನಂಜುಂಡ
15/01/2013






4 ಕಾಮೆಂಟ್‌ಗಳು: