ಆಹಾ! ಬಂದಿತು ಹಬ್ಬಗಳಾವಳಿ;ಮನೆಮನೆಯಲಿ ಸಂಭ್ರಮಕೇಲಿ
ಅಡುಗೆಯ ಪಾತ್ರೆಗಳಾಡುತಿರೋಕುಳಿ ವಿಧವಿಧ ಷಡ್ರಸಪಾಕದಲಿ
ಮನವಿರೆ ಯೋಗಸಮಾಧಿಯಲಿ;ಸವಿ ಭೋಜನಸಂಸಿದ್ಧಿಯಲಿ
ಪಂಚೇಂದ್ರಿಯಗಳು ಒಂದೆಡೆಗೂಡಿವೆ;ಒಬ್ಬಟ್ಟಿನ ರುಚಿಕಟ್ಟಿನಲಿ
ಸಾರೊಳಗದ್ದಿಹ ಸೌಟಿನ ಸದ್ದಿಗೆ ಕಿವಿಗಳು ಎದ್ದೆದ್ದೇಳುತಿವೆ;
ರುಚಿರುಚಿಯಡುಗೆಗಳೂಟದ ಚಪಲಕೆ ರಸನದಿ ಜಲವೊಸರುಕ್ಕುತಿದೆ
ಹೊಟ್ಟೆಯು ಚುರುಗುಟ್ಟುತಿದೆ;ತೇಗುವ ಕ್ಷಣಗಳನೆಣಿಸುತಿದೆ
ಉದರದೊಳಗ್ನಿಯ ಜ್ವಾಲಾಮಾಲೆಯು ಯಾಗಸಮಾಪ್ತಿಗೆ ಕಾಯುತಿದೆ
ಅಟ್ಟದ ಮೇಲಿನ ಡಬ್ಬದೊಳಿಟ್ಟಿಹ ಹಪ್ಪಳಗಳು ಕೆಳಗಿಳಿಯುತಿವೆ
ಕುದಿಯುವ ಎಣ್ಣೆಯ ಬಾಣಲೆಯೊಳಗಡೆ ಮುಳುಗುತಲೇಳುತಲುಬ್ಬುತಿವೆ
ಬಾಳಕಗಳು ಗರಿಯಾಗುತಿವೆ; ಬಾಯೊಳಗಿಳಿಯಲು ಕಾಯುತಿವೆ
ತರತರ ಹೊಸ ತರಕಾರಿಗಳೆಲ್ಲವು ಹದದುರಿಯೊಲೆಯಲಿ ಬೇಯುತಿವೆ
ಮೊಳಕೆಗÀಳೊಡೆದಿಹ ಬಗೆಬಗೆ ಕಾಳ್ಗಳು ಗಜ್ಜರಿತುರಿ ಜೊತೆಗೂಡುತಿವೆ
ಹಸಿಮೆಣಸಿನ ತುಣುಕುಗಳೊಂದಿಗೆ ತೆಂಗಿನ ಸಂಗದೊಳಾಡುತಿವೆ
ಲಿಂಬೆಯ ರಸವನು ಹೀರುತಿವೆ; ಸಾಸಿವೆಗಳು ಚಟಪಟಿಸುತಿವೆ
ಹಸಿ ಕೊತ್ತಂಬರಿ ಸೊಪ್ಪುಗಳಂದದಿ ಕೋಸಂಬರಿಯನು ಚುಂಬಿಸಿವೆ
ಬಂದಿತು ಕ್ಷಣವೊಂದಿನಿತೂ ಕಾಯದೆ ತುಪ್ಪದ ಘಮಘಮವೂಡುತಲಿ.
ಅಡುಗೆಯ ಮಂಗಳವಾದ್ಯದ ಸದ್ದಿರೆ ಸಟ್ಟಗದೊಳಮೈಕಟ್ಟಿನಲಿ
ತಂದಿಟ್ಟಿಹ ಹೊಸ ಬಟ್ಟಲಲಿ; ಕೈಬಾಯ್ಗಳ ಒಗ್ಗಟ್ಟಿನಲಿ
ಒಂದರ ಮೇಲೊಂದಡಿಗೆಗಳೆಲ್ಲವು ಉದರದೊಳಿಳಿದಿವೆ ಸರದಿಯಲಿ.
ಡಿ.ನಂಜುಂಡ
04/10/2015