ಸೋಮವಾರ, ಮಾರ್ಚ್ 30, 2015

ನಿವೇದನೆ

ಓಡಬೇಡವೆಲೆ ಕಾಲ! ಮನವು ಓಡುವ ಹಾಗೆ
ಎಡಬಿಡದೆ ನನ್ನೊಡನೆ ಮೆಲ್ಲನಾಡುತಿರು
ಸಡಗರದಿ ನಾನಿರಲು ನೀ ಮುಂದೆ ಹೋಗದಿರು
ಕಾಡುವಾ ಬೇಸರಕೆ ವೇಗಗುಂದದಿರು

ಕಷ್ಟವದು ಬಂದಾಗ ಮನವ ಮುಂದೆಳೆದು ನೀ-
ನಿಷ್ಟವಿರೆ ಹಿಂದೆಳೆದು ಸಂತುಲನಗೊಳಿಸು
ಸೃಷ್ಟಿತಾಳಕೆ ನಲಿವ ವಿಶ್ವದೃಷ್ಟಿಯ ಹಾಗೆ
ವ್ಯಷ್ಟಿರೂಪದೊಳೆನ್ನ ಸಂತುಷ್ಟಿಗೊಳಿಸು

ಹೂವರಳಿ ಕಾಯಾಗಿ ಪಕ್ವವಾಗುವ ಹಾಗೆ
ಜೀವನದ ಅನುಭವವು ತಾ ಮಾಗುತಿರಲಿ
ಭವಕರ್ಮಕೃತಫಲವು ತೊಟ್ಟು ಕಳಚುತಲುದುರಿ
ಶಿವಧ್ಯಾನದಾನಂದಮೌನವೊಂದಿರಲಿ

ಡಿ.ನಂಜುಂಡ

30/03/2015

ಭಾನುವಾರ, ಮಾರ್ಚ್ 29, 2015

ರಾಮನಾಮಮದ್ಯಪಾನ

ರಾಮನಾಮದಮಲಿನಲ್ಲಿ
ತೇಲುತಿಹಳೆ ಜಾನಕಿ?
ರಾಮಹೃದಯಕಮಲನಾಲ-
ಮಧುವಾದಳೆ ಜಾನಕಿ?

ಮದವೇರಿದ ಚಿತ್ತದೊಳಗೆ
ಪಿತ್ತರಸವನಿಟ್ಟಳೇ?
ಹತ್ತು ತಲೆಗಳೊಳಗೆ ನೂರು
ಕಲ್ಪನೆಗಳ ಹೆತ್ತಳೇ?

ವನವನಗಳನಲೆದು ಅಲೆದು
ಗೆಡ್ಡೆಗೆಣಸನಾಯ್ದಳೇ?
ಬಂಗಾರದ ಮೋಹದಿಂದ
ಜಿಂಕೆಗೆ ಮನಸೋತಳೆ?

ಕಾಮರೂಪಕನಕಮಯ
ಲಂಕೆಯನ್ನು ಸುಟ್ಟಳೆ?
ರಾಮಚರಿತಮಾನಸಕ್ಕೆ
ಮತ್ತೆ ಪುಟವನಿಟ್ಟಳೇ?

ರಾಮಮಹಾನ್ವೇಷಣೆಯಲಿ
ನಾವೆಲ್ಲರೂ ಹನುಮರೇ?
ರಾಮಾಯಣದರ್ಶನದಲಿ
ನಾವೆಲ್ಲರೂ ಋಷಿಗಳೇ?

ಡಿ. ನಂಜುಂಡ

29/03/2015

ರಾಮ

‘ಮರ’ ‘ಮರ’ ಎಂದರೆ ಸರಸರ ಬರುವನು
ವರವೀಯುತಲಾ ಶ್ರೀರಾಮ
ಮರದೊಳಗಿನ ಮಂದಾಗ್ನಿಯ ತೆರದಲಿ
ಅರಿವೊಳಗಿಹನಾ ರಘುರಾಮ

ಹರಿವ ಹೊನಲುಗಳ ಬೆಳ್ನೊರೆ ನಗುವಲಿ
ಇರವನು ತೋರುವನರೆ ಚಣದಿ
ಮೆರೆವನು ಮೌನದ ತಳದುದ್ದಗಲದಿ
ಸರಯೂ ನೀರಂತವಸರದಿ

ಬೀಸುವ ಗಾಳಿಯೊಳೀಸುತ ಬರುವನು
ಉಸಿರೊಳು ಧುಮುಕುತಲೇಳುವನು
ಹಸಿರಲೆ ಕುಡಿಗಳಿಗೀಯುತ ಹೊಸತನು
ನಸುನಗುತಲಿ ಕುಣಿದಾಡುವನು

ಹೊಲದೊಳಗಿಹನಾ ಹಾಲ್ದೆನೆಕಾಳೊಳು
ನೆಲದೊಳಗಾ ಜಲರೂಪದೊಳು
ಒಲವಿನಲುಸುರಿದ ಒಂದಕ್ಷರವನು
ಹಲವಾಗಿಸುವಾ ಮಂತ್ರದೊಳು

ಹಕ್ಕಿಗಳುಲಿಗಳ ಬಾನಲಿ ಹರಹುತ
ಒಕ್ಕುವನಾ ಹರಿ ಪ್ರಣವವನು
ಅಕ್ಕರದುದರಕೆ ಅರ್ಥವ ತೂರಿ
ಹೊಕ್ಕೆದೆಯೊಳು ತಾ ಮೊಳಗುವನು

ಡಿ.ನಂಜುಂಡ

29/03/2015

ಶನಿವಾರ, ಮಾರ್ಚ್ 21, 2015

ಪಾಹಿ ಪಾಹಿ ಪ್ರಕೃತಿಮಾತೆ!

ಪ್ರಕೃತಿಮಾತೆ ಪ್ರಾಣದಾತೆ
ಪಂಚಭೂತರೂಪಿಣಿ
ಅಖಿಲಜೀವಜನ್ಮದಾತೆ
ಸಕಲ ಕಾರ್ಯಕಾರಣಿ

ಅನ್ನದಾತೆ ಜಲವಿದಾತೆ
ಕ್ಷುತ್ಪಿಪಾಸಹಾರಿಣಿ
ನಿತ್ಯಹರಿದ್ವರ್ಣವಿಪಿನ-
ಪುಷ್ಪಗಂಧಧಾರಿಣಿ

ವರ್ತಮಾನಕಾಲಾವೃತೆ
ಭೂತಭವ್ಯವರ್ಜಿತೆ
ವೇದಪುರಾಣೇತಿಹಾಸ-
ಕಾವ್ಯರಸಾಕರ್ಷಿತೆ

ಸರ್ವಾಪಗಸಂಜೀವಿನಿ
ಜೀವಾಮೃತವರ್ಷಿಣಿ
ಸಕಲಭುವನಸೃಷ್ಟಿಮೂಲ-
ಬೀಜಾಂಕುರಗೋಪಿನಿ

ಪಾಹಿ ಪಾಹಿ ಪ್ರಕೃತಿಮಾತೆ
ಪರಮಸೌಖ್ಯದಾಯಿನಿ
ಜನನಮರಣಜರೇತ್ಯಾದಿ
ಭವಭಯಾಪಹಾರಿಣಿ

ಡಿ.ನಂಜುಂಡ
21/03/2015


ಗುರುವಾರ, ಮಾರ್ಚ್ 12, 2015

ಶಂಬರಾರಿ

ಬಂದ ಬಂದ ಶಂಬರಾರಿ
ಪಂಚಪುಷ್ಪಚಾಪಧಾರಿ
ನಿಂದ ಚೈತ್ರರಥವನೇರಿ
ಅವನೇ ಪ್ರೇಮಜ್ವರಾರಿ

ಹರಿದಂಬರ ಪರಿಶೋಭಿತ
ಗಿರಿತೀರಾರಣ್ಯವಿಹಾರಿ
ನವಕೋಕಿಲ ಕಲಕಂಠದ
ವನಘಂಟಾರವಸಂಚಾರಿ

ಕುಸುಮಾನನಮಧುಚುಂಬಿತ
ಸಂವೇದನಮನಸಂಸಾರಿ
ಯುವಕಲ್ಪಿತ ಕಾಮಿತ ವರ-
ಫಲವಿತರಣದಧಿಕಾರಿ

ಡಿ.ನಂಜುಂಡ

12/03/2015

ಮಂಗಳವಾರ, ಮಾರ್ಚ್ 10, 2015

ಚುಟುಕಗಳು

(1)
ಬಾಲ್ಯದ ಆಟಗಳೋಟಗಳೂಟಗ-
ಳಾನಂದಕಿಹುದೇ ಸರಿಸಾಟಿ?
ಬೇಡದ ಮುಪ್ಪಿನ ಕಷ್ಟದ ಕಾಲಕೆ 
ನೆನಪುಗಳೇ ಸಹಪಾಠಿ

(2)
ಶಿಶಿರದಲೆಲೆಗಳ ಕಳಚುವ ತರುಗಳು
ಚೈತ್ರದಿ ಹಸಿರುಡೆಯುಟ್ಟಂತೆ
ಮತ್ತೆ ಯೌವನವು ಬಾರದದೇತಕೋ
ಹೊಸವುಲ್ಲಾಸವ ತರುವಂತೆ
(3)

ಕಡಿದ ಕೊಂಬೆಗಳು ಮತ್ತೆ ಚಿಗುರುವವು
ಕೊಡಲಿಗಳೇಟನು ಮರೆಯವುವು
ಮನಸೊಳು ನಾಟಿದ ಏಟುಗಳೇತಕೋ
ಎಡಬಿಡದೆಮ್ಮನು ಕಾಡುವುವು

ಡಿ.ನಂಜುಂಡ
10/03/2015


ಭಾನುವಾರ, ಮಾರ್ಚ್ 8, 2015

ವಿಶ್ವವನಿತೆ!

ಪ್ರಕೃತಿಮಾತೆ! ವಿಶ್ವವನಿತೆ!
ಹೇ! ಸ್ವಯಂ ಪ್ರಕಾಶಿತೆ!
ಚೇತನೇತ್ಯಚೇತನೇತಿ
ಸರ್ವಭೂತಶೋಭಿತೆ!

ಅಖಿಲಜೀವಕೋಟಿಜಾತೆ!
ಆಂತರ್ಯವಿರಾಜಿತೆ!
ಸಕಲಭುವನಬೀಜರೂಪ
ಹೃತ್ಸರೋಜಸಂಸ್ಥಿತೆ!

ನಿಗಮಾಗಮಸನ್ನಿಹಿತೆ!
ಸ್ವರವ್ಯಂಜನರಂಜಿತೆ!
ಋಷಿದರ್ಶಿತ ಕವಿಕರ್ಷಿತ
ಭಾವವರ್ಣಪರಿವೃತೆ!

ಪಾಹಿ ಪಾಹಿ ಜಗನ್ಮಾತೆ!
ನಾಮರೂಪವರ್ಜಿತೆ!
ಸರ್ವನಾಮಗುಣವಾಚಕ
ಕಾಲತ್ರಯಕಲ್ಪಿತೆ!

ಡಿ.ನಂಜುಂಡ
08/03/2015



ಗುರುವಾರ, ಮಾರ್ಚ್ 5, 2015

ಸೃಷ್ಟಿ-ಸ್ಥಿತಿ-ಲಯ

ಉಚ್ಛ್ವಾಸವೇ ಸೃಷ್ಟಿ ನಿಃಶ್ವಾಸವೇ ನಾಶ
ಸ್ಥಿತಿಯುಸಿರ ಕುಂಭಕದ ಮಧುರ ಕ್ಷಣವು
ಕ್ಷಣದ ಕಲ್ಪನೆಗೆ ಭಾವಬಿಂಬವು ಫಲಿಸಿ
ಹೃದಯಮಧ್ಯದಿ ನೆಲೆಸೆ ಅದು ವಿಷ್ಣುವು

ಒಳಸೆಳೆದ ಉಸಿರಿನಾ ಶಕ್ತಿಯಿಂದಲಿ ಚಿಮ್ಮಿ
ಹೊಮ್ಮಿದಾ ಕಲ್ಪನೆಯು ಬ್ರಹ್ಮಲೀಲೆ
ಹೊರನೂಕಿದುಸಿರಿನಲಿ ವಿಷಯಗಳು ಮರೆಯಾಗೆ
ಅದು ನಮ್ಮ ಪರಶಿವನ ಲಯದ ಲೀಲೆ

ಉಚ್ಛ್ವಾಸಸಂಕಲ್ಪಸೃಷ್ಟಿಯದು ಒಳ ಬಂದು
ಕುಂಭಕದಿ ತಾ ನಿಂತು ಚಿತ್ರವಾಗಿ
ಭಾವಾಂತವರ್ಣವದು ತಾ ವಿಸ್ತಾರವಾಗೆ
ಜಗದಗಲ ಶೋಭಿಪುದು ವಿಷ್ಣುವಾಗಿ.

ಡಿ.ನಂಜುಂಡ
05/03/2015




ಭಾನುವಾರ, ಮಾರ್ಚ್ 1, 2015

ಎಲ್ಲಿಹನು?

ಎಲ್ಲಿ ಹುಡುಕಾಡಿದರೂ ಸಿಗಲಿಲ್ಲವೇಕೋ
ಬಲ್ಲವರು ಯಾರಿಲ್ಲವೀ ಜಗದಲೇಕೋ

ಸೊಲ್ಲು ಸೊಲ್ಲಿನ ತಿಳಿವು ತಿಳಿಯದೇಕೋ
ಕಲ್ಲು ಕಲ್ಲಿನ ಪೂಜೆಯರಿಯದೇಕೋ
ಬೆಲ್ಲದೊಳಡಗಿಹನೇ? ಪಲ್ಲವದೊಳಿಹನೇ?
ನಲ್ಲೆಯಾ ಮುಗುಳ್ನಗೆಗೆ ಒಲವ ತೀಡಿಹನೇ?

ಇಲ್ಲ ಸಲ್ಲದ ಭಾವದಲ್ಲಲ್ಲಿ ಹುಡುಕಿ
ಚೆಲ್ಲಿ ಹೋಯಿತೆ ಎನ್ನ ಮತಿಯ ಶಕುತಿ
ಸುಳ್ಳಿನಾ ಹಳ್ಳದೊಳ ಹರಿವೆಲ್ಲವಳಿಯೆ
ಅಲ್ಲುಳಿವುದೆಲ್ಲವೂ ಹರಿಯ ಸುಳಿವೇ?

ಹುಲ್ಲಾಗಿ ಹಸುವಿನೊಳ ಹಾಲಾಗಿ ಬಂದು
ಮೆಲ್ಲುತಿಹನೇ ಮಗುವ ಜೊಲ್ಲಾಗಿ ನಿಂದು
ಗಲ್ಲದಾ ಕುಳಿಯೊಳಗೆ ಮೊಲ್ಲೆ ಮುಗುಳಿರಿಸಿ
ಮೆಲ್ಲನರಳಿಹನೇ ಅಲ್ಲಿ ತೊದಲ ಜೇನಿರಿಸಿ 

ಡಿ.ನಂಜುಂಡ

01/03/2015