ಶುಕ್ರವಾರ, ಆಗಸ್ಟ್ 28, 2015

ವರಮಹಾಲಕ್ಷ್ಮೀ

ವರಮಹಾಲಕ್ಷ್ಮಿ ತವ ಚರಣಮಾಲಂಬೇ
ಸರಸಿಜಾನನೇ ಸರೋಜನಯನೇ ಅಂಬೇ
ವರಮಹಾಲಕ್ಷ್ಮಿ ತವ ಚರಣಮಾಲಂಬೇ

ಹರಿಮನೋಲ್ಲಾಸಿನಿ ಹರಿಹೃದಯವಾಸಿನಿ
ಹರಿನಾಮಸಂಕೀರ್ತನಾಲಿಂಗಿನಿ
ಹರಿಪದ್ಮಮಧುಸ್ವಾದಸಂವೇದಿನಿ
ಹರಿತತ್ತ್ವವಿಸ್ತಾರಸಂಚಾರಿಣಿ
ವರಮಹಾಲಕ್ಷ್ಮಿ ತವ ಚರಣಮಾಲಂಬೇ

ಸಂಚಿತಾಗಾಮಿಪ್ರಾರಬ್ದನಾಶಿನಿ
ವಾಂಚಿತಾರ್ಥಫಲದಾಯಿನಿ
ಪಂಚಾನನವಿರಿಂಚ್ಯಾದಿ ದೇವ ಪ್ರ-
ಪಂಚಧಾರಿಣಿ ತವ ಚರಣಮಾಲಂಬೇ

ಡಿ.ನಂಜುಂಡ

28/08/2015

ಬುಧವಾರ, ಆಗಸ್ಟ್ 26, 2015

ಮಳೆ ಸುರಿಯಲಿ

ಮಳೆ ಸುರಿಯಲಿ, ಹೊಳೆಕೆರೆಗಳು ನೆರೆಯಲಿ
ಮಕ್ಕಳು-ಮರಿಗಳು ಮನೆಯೊಳಗುಳಿಯಲಿ
ಹಾಗೂ ಹೀಗೂ ಶಾಲೆಗೆ ಹೊರಟರೆ
ಕೊಡೆಗಳ ಗಡಿಯಿಂದಾಚೆಗೆ ಹಾರಿಸಿ
ಪಾಟೀ ಚೀಲವ ತೋಯಿಸಲಿ
ತಲೆಮೇಲ್ ಗಂಗೆಯನಾಡಿಸಲಿ

ಭೋರ್ಗರೆಯುವ ನೀರ್ಗರೆತ ಸದ್ದಿಗೆ
ಅಪ್ಪಳಿಸುವ ಬಿರುಗಾಳಿಯ ಹೊಡೆತಕೆ
ಆಡಿದ ಮಾತುಗಳಾರಿಗೂ ಕೇಳದೆ
ಗುರುಗಳು ಪಾಠವನಲ್ಲೇ ನಿಲ್ಲಿಸಿ
ಶಾಲೆಗೆ ರಜೆಯನು ಘೋಷಿಸಲಿ
ಗದ್ದೆಯೊಳಗೆಯನು ಹಾಕಿಸಲಿ

ನದಿಗಳ ಅಣೆಗಳು ತುಂಬಲಿ ತುಳುಕಲಿ
ಕತ್ತಲೆಯಳಿಯಲಿ ದೀಪಗಳುರಿಯಲಿ
ಬರ ಪರಿಹಾರದ ಹಣ ಹಿಂತಿರುಗಲಿ
ಸರ್ಕಾರದ ತಲೆನೋವಳಿಯಲಿ 
ಸುಗ್ಗಿಯ ಪದಗಳನೊಕ್ಕಿಸಲಿ
ನಾಡಿನ ಬೊಕ್ಕಸವುಕ್ಕಿಸಲಿ

ಡಿ.ನಂಜುಂಡ

26/08/2015

ಸೋಮವಾರ, ಆಗಸ್ಟ್ 24, 2015

ಬರ!

ಕಾರ್ಗಲ್ಲಿನ ಮೇಲಿಲ್ಲದೆ
ನೀರ್ಗರೆತದ ನೋಟ
ಕರುನಾಡಿನ ಗುಡಿಗುಡಿಯಲಿ
ಕಾರ್ಗತ್ತಲಿನಾಟ

ಕಾರ್ಮೋಡಗಳಾವರಿಸದೆ
ನೀರ್ಕೋಡಿಗಳಿಲ್ಲ
ನೀರಾಡದೆ ಬಿರುಬಿಟ್ಟಿವೆ
ಕಾರ್ಗದ್ದೆಗಳೆಲ್ಲ

ಮಲೆನಾಡಿನ ಪಡೆನುಡಿಗಳ
ಸಡಗರವಡಗಿಂತು
ಮಳೆಹಾಡಿನ ಲಯಗೆಟ್ಟಿರೆ
ಬೆಳೆ ಹಾಡುಗಳೆಂತು?

ಡಿ.ನಂಜುಂಡ
24/08/2015


ಭಾನುವಾರ, ಆಗಸ್ಟ್ 23, 2015

ಉಸಿರೇ!

ನಿಯತ ಗತಿಯನು ತೊರೆದು ಓಡದಿರು ಎಲೆ ಉಸಿರೆ!
ನಿನ್ನ ತಾಳಕೆ ಕುಣಿವ ಮನಸ ನೋಡು
ನಿನ್ನಾಟ ನೆಗೆತಗಳ ಲಯಬದ್ಧಪಾಠವಿರೆ
ನೋವು ನಲಿವುಗಳೆಲ್ಲ ಮಧುರ ಹಾಡು

ಎದೆಯ ಭಾಗದಿ ನಿನ್ನ ಕುಣಿತದೇರಿಳಿತವಿರೆ
ಮನದೊಳಗೆ ಒತ್ತಡದÀ ಭರತವಾಗ
ಉದರಭಾಗವ ಹೊಕ್ಕು ನೀನಲ್ಲಿಯಾಡುತಿರೆ
ಚಣದೊಳಗೆ ಒತ್ತಡದ ಇಳಿತವಾಗ

ದಿನಗೆಲಸದಾ ಹೊತ್ತು ಆಲಸ್ಯವಾವರಿಸೆ
ನೀನೆದೆಯ ಮೇಲೇರಿ ಕುಣಿದು ನೋಡು
ಉತ್ಸಾಹದತಿರೇಕವಿರೆ ಉದರಕಿಳಿ ಬೇಗ
ಉದ್ವೇಗವಿಳಿಯುವುದು ಆಗ ನೋಡು

ಬೆಕ್ಕು ನಿದ್ರಿಸುವಾಗ ಅದರ ಹೊಟ್ಟೆಯ ನೋಡು
ದಿನವೂ ಮಲಗುವ ಹೊತ್ತು ನೀನಾಡು ಹಾಗೆ
ಇಲಿಯನಾಡಿಸಿ ಹಿಡಿವ ಬೆಕ್ಕಿನೆದೆಯನು ನೋಡು
ಚುರುಕಿನಾ ಗತಿಗಾಗಿ ಸಾಗು ಎದೆಯೊಳಗೆ

ಕಷ್ಟದಾ ಕೆಲಸವನು ಇಷ್ಟದಿಂದಲಿ ಮಾಡೆ
ಮನದ ಒತ್ತಡವಷ್ಟು ಇಳಿಯುವುದು ಬೇಗ
ಸೃಷ್ಟಿಯಂದದ ಒಟ್ಟು ಸೌಂದರ್ಯದಲಿ ಮುಳುಗೆ
ಸಮತೆಯಲಿ ನೀ ಹರಿವೆ ದೇಹದೊಳಗಾಗ

ಡಿ.ನಂಜುಂಡ

23/08/2015

ಬುಧವಾರ, ಆಗಸ್ಟ್ 19, 2015

ಅಕ್ಷರ

ಎದೆಯಾಳದಿ ಮಿಂದೆದ್ದಿಹ
ಮೆದುವಕ್ಕರವೊಂದು
ಮಧುಭಾವವ ತಂದಿತ್ತಿದೆ
ಪದಗೂಡುತಲಿಂದು

ರವಿಕಿರಣಗಳೋಕುಳಿಯಲಿ
ಬುವಿ ತಾ ಮುಳುಗಿರಲು
ಕವಿಕರ್ಷಿತ ನವಹರ್ಷದ
ಸವಿದೆನೆದೂಗಿರಲು

ಕರಿಗತ್ತಲ ತೆರೆಯ ಹರಿದು
ಕೆರೆಗಳ ಸುತ್ತುವರಿದು
ಓರೋರೆಯಲೋಲಾಡುತ
ನೀರ ಮೇಲೆ ಸರಿದು

ಬಾನಗಲದ ತಾನನವನು
ಕಾನನದೊಳು ತೂರಿ
ಬಾನಾಡಿಗಳಾನನದೊಳು
ತಾನೇಳಲು ಸೂರಿ

ಮುಂಜಾನೆಯ ಮಂಜ ಹರಿದು
ಸಂಜೆಗೆ ತಂಪ ಹೊಸೆದು
ನಂಜುಂಡನ ತಾಂಡವಕೆ
ಪಂಜಿನ ಬೆಳಕನೆಸೆದು

ಜಗವ ಸುತ್ತುತಿರಲು ಶಕುತಿ
ಗಗನಾಕ್ಷರದಾಕೃತಿ
ಮಗುವಂದದ ತೊದಲಿನಲ್ಲಿ
ಬಾಗಿತೇ ಕೃತಿ ಸಂತತಿ?

ಡಿ.ನಂಜುಂಡ
19/08/2015


ಭಾನುವಾರ, ಆಗಸ್ಟ್ 16, 2015

ಮಾಂ ಪಾಹಿ ವಾಗ್ವಾಣಿ


ಮಾಂ ಪಾಹಿ ವಾಗ್ವಾಣಿ ಮಾಂ ಪಾಹಿ ಗೀರ್ವಾಣಿ
ಸಂಗೀತಸಾಮ್ರಾಜ್ಯಸಂಸ್ಥಾಪಿನಿ
ಬಹುಜನ್ಮಸಂಸಿದ್ಧಯೋಗೇನ ಸಂಸ್ಕರಿತ
ವಾಗರ್ಥಪದಬೀಜಸಂಗೋಪಿನಿ

ಆನಂದಫಲಭಾರಕಾವ್ಯಾಂಗಿನಿ
ಛಂದೋsಲಂಕಾರಸಂಚಾರಿಣಿ
ಪ್ರಾಸಾಕ್ಷರಾರೋಪಿತಾವರ್ತ ಲಾಲಿತ್ಯ
ಪರಿಪೂರ್ಣ ಪದವಾಕ್ಯಸಂಕರ್ಷಿಣಿ

ಜಗದೇಕ ಸೌಂದರ್ಯ ಘನರೂಪಿಣಿ
ಗಗನಾದಿಮಧ್ಯಾಂತಸಂಭಾಷಿಣಿ
ಓಂಕಾರ ನಾದಮಯ ಸ್ವರವರ್ಣ ಸಂಕ್ರಮಿತ
ವ್ಯೋಮಾಂತರಾಲಾಂತರಾರೋಹಿಣಿ

ಡಿ.ನಂಜುಂಡ

16/08/2015

ನಲ್ಲೆ

ನಲ್ಲೆಯು ತವರಿಗೆ ತೆರಳಿದಳೆಂದರೆ
ಮೊಲ್ಲೆಯ ಬಳ್ಳಿಯು ಬಾಡುವುದು
ಚೆಲ್ಲುವ ಪರಿಮಳಕೆಲ್ಲಿದೆ ಮುಕುತಿಯು?
ಸೊಲ್ಲಿನ ಶಕುತಿಯೂ ಕುಂದುವುದು

ಅಡಿಗೆಯ ಗಡಿಗೆಗಳಡಿಮೇಲಾಗಿ
ಗಡಿಬಿಡಿಗೆಲಸದಲೊಡೆಯುವುವು
ಬಡಿಸುವ ಕೈಬಳೆ ಮಿಡಿತವ ಕೇಳದೆ
ನುಡಿನಡೆಬೆಡಗುಗಳಳಿಯುವುವು

ಮಂಗಳ ರಂಗುಗಳಿಲ್ಲದ ಮನೆ-
ಯಂಗಳ ತಾ ಬಣಗುಟ್ಟುವುದು
ನುಂಗಲು ತಟ್ಟೆಯೊಳಿಟ್ಟಿಹ ಗಂಜಿಯು
ಚಂಗನೆ ತಿಪ್ಪಗೆ ಜಿಗಿಯುವುದು

ನಲ್ಲೆಯು ಮೆಲ್ಲನೆ ಮನೆಯೊಳಗಡಿಯಿಡೆ
ಗಲ್ಲದ ಹೂವಲ್ಲಾಡುವುದು
ಬೆಲ್ಲದ ಸವಿಯೋಡೋಡುತ ಬರುವುದು
ನಲ್ಲನ ಕೆನ್ನೆಯನಡರುವುದು 

ಡಿ.ನಂಜುಂಡ

16/08/2015

ಶನಿವಾರ, ಆಗಸ್ಟ್ 15, 2015

ಶ್ರಾವಣ

ಮಾವಿನ ತೋರಣ ಬೆಲ್ಲದ ಹೂರಣ
ಶ್ರಾವಣಮಾಸದ ಆಚರಣ
ದೇವರ ಗುಡಿಯೊಳು ಪುಷ್ಟಾವರಣ
ಘಂಟಾನಾದದ ಅನುರಣನ

ಜೀವನ ಯಾತ್ರಾಪಥಸಂಚಲನ
ಅನುದಿನ ನವವಿಧ ಸಂಕ್ರಮಣ
ಹೃದಯಸರೋಜದಿ ಮಧುರಸಪೂರಣ
ನವ ಉಲ್ಲಾಸದ ಹೊಂಗಿರಣ

ಗಿರಿಮುಖಚುಂಬಿತ ನೀರದನರ್ತನ
ಜಲಪಾದಗಳಾ ಸಂಚರಣ
ಹರಿಯುವ ಹೊನಲಿನ ಹರಿಸಂಕೀರ್ತನ
ಸಾಗರಶಯನದಿ ಸಂಗಮನ

ಡಿ.ನಂಜುಂಡ
15/08/2015


ಶುಕ್ರವಾರ, ಆಗಸ್ಟ್ 14, 2015

ಗಂಡನ ಪೂಜೆ

ಎಲ್ಲಿಗ್ ಹೋದ್ರೀ ಬನ್ರೀ ಇಲ್ಲಿ
ಪೂಜೇ ಮಾಡ್ಬೇಕು
ಅಮಾವಾಸ್ಯೇ ಮುಗೀದ್ರೋಳ್ಗೆ
ಪೂಜೆಯಾಗ್ಬೇಕು

ನಿನ್ನೇ ತಾನೇ ಹೇಳಿದ್ನಲ್ರೀ
ಹೂವನ್ ತರ್ಬೇಕು
ಕನ್ನಡ್ ದಲ್ಲೇ ಹೇಳಿಲ್ವೇನ್ರಿ
ಬೇಗಾ ಬರ್ಬೇಕು

ನಿಮ್ಮನ್ ಕಟ್ಕೊಂಡ್ ಸಾಕಾಗೋಯ್ತು
ಸುಮ್ನೆ ಕುಂತಿದ್ರಲ್ರೀ
ಹೋಳ್ಗೇ ಬೇಯ್ಸೀ ಕೊಡ್ಬಾರ್ದೇನ್ರೀ
ಗೊತ್ತಿದೆಯಂತಿದ್ರಲ್ರೀ

ಹೋತ್ತೂ ಗೊತ್ತೂ ಒಂದೂ ಇಲ್ಲ
ಲ್ಯಾಪ್ಟಾಪ್ ಬಿಚ್ಕೊಂತೀರಿ
ಕೂಗೀದ್ರೂನೂ ಗೊತ್ತಾಗೋಲ್ಲ
ನೋಡ್ಕೊಂಡ್ ಕುಂತಿರ್ತೀರಿ

ಬಡ್ಕೊಂಡ್ ಬಡ್ಕೊಂಡ್ ಸಾಕಾಗೋಯ್ತು
ಮೇಲೆದ್ ಬರೋದಿಲ್ಲ
ಫೇಸ್ ಬುಕ್ ಓದ್ತಾ ಕೂತ್ಕೊಂಡಿದ್ರೆ
ಸತ್ರೂ ನೋಡೋದಿಲ್ಲ

ಪಾದಾ ತೊಳ್ದೂ ಪೂಜೇ ಮಾಡೀ
ಕಣ್ಗೇ ಒತ್ಗೋಂತೀನ್ರೀ
ಲ್ಯಾಪ್ ಟಾಪ್ ಒದ್ದಾಕ್ ಬರ್ರೀ ಇಲ್ಲಿ
ಪುಣ್ಯಾ ಕಟ್ಕೋಂತೀನ್ರೀ

ಡಿ.ನಂಜುಂಡ

14/08/2015