ಬುಧವಾರ, ಆಗಸ್ಟ್ 12, 2015

ಮಾತೊಂದ ಕೇಳು ಮನವೆ!

ಕಾರಣಗಳಿಲ್ಲದೆಯೆ ಓಡದಿರು ಎಲೆ ಮನವೆ!
ಕುಟ್ಟಿ ಕುಂದಾಪುರಕೆ ಹೋದ ಹಾಗೆ
ಅಜ್ಜಿಯಾ ಮನೆ ಮುಟ್ಟಿ ಹಿಂದಿರುಗಿ ನೀ ಬರಲು
ಅಷ್ಟು ವೇಗದ ಓಟವೇತಕ್ಕೆ ನಿನಗೆ?

ನೀನು ಬಯಸಿದ ವಸ್ತು-ವಿಷಯಗಳು ನೂರಾರು
ಎಲ್ಲವೂ ನಿನಗೆಲ್ಲಿ ದಕ್ಕುವುದು ಹೇಳು?
ರಸ್ತೆಗಳ ಉಬ್ಬುಗಳು ಅವಸರವ ತಡೆವಂತೆ
ನನ್ನ ಮಾತಿದು ನಿನಗೆ ತಡೆಯಂತೆ- ಕೇಳು

ನಿನ್ನೆಲ್ಲ ಮುಖಗಳನು ನನಗೆ ಕಾಣುವ ಹಾಗೆ
ಮುಖವಾಡಗಳನೆಲ್ಲ ಎಸೆದುಬಿಡು ಮನವೆ!
ನೀನಿಡುವ ಹೆಜ್ಜೆಗಳ ಎಣಿಕೆಗಳು ಸಿಗುವಂತೆ
ಅಂಬೆಗಾಲಲಿ ಇತ್ತ ಬಾರೆನ್ನ ಮಗುವೆ!

ಡಿ.ನಂಜುಂಡ
12/08/2015


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ