ಶುಕ್ರವಾರ, ನವೆಂಬರ್ 29, 2013

ಕಳೆದು ಉಳಿಸುವ ಸುಳಿವ ತಿಳಿಸು ಬಾ



ನುಸುಳಿ ಬಾ ಎಲೆ ಮಾಯೆ! ಪಲುಕಿನೊಳಗೆ
ಕಳೆದು ಉಳಿಸುವ ಸುಳಿವ ತಿಳಿಸು ಎನಗೆ

ಹೊಳೆಯ ಗಳಿಕೆಯನಳಿಸಿ ತೇಲಿಸುತ ಅಲೆಯೊಳಗೆ
ಗುಳ್ಳೆಯೊಳು ಅರೆದರೆದು ತಿಳಿಗೊಳಿಸುತಿಹಳು;
ಉಳಿದ ಸಾರವನೆತ್ತಿ ನೀಲ ಬಾನಲಿ ಬಿತ್ತಿ
ಇಳೆಗಿಳಿಸಿ ಮತ್ತದನು ಪೊರೆದವಳು ಯಾರು?

ಮಳೆಯ ಹನಿಗಳನೆಳೆದು ಆಳದೊಳು ಸೆಲೆಯಿರಿಸಿ
ಮೇಲೆತ್ತಿ ಮರಗಳಿಗೆ ಜಲವೀಯುತಿಹಳು;
ಪಲ್ಲವಗಳುದರದಲಿ ಉಲ್ಲಾಸರಸವಿರಿಸಿ
ಬಲಿತಾಗ ಅವುಗಳನು ಕಳಚಿದವಳಾರು?

ಉಟ್ಟು ಹಸಿರೆಲೆಯುಡೆಯ ತೊಟ್ಟು ಹೂ ಗುಚ್ಛಗಳ
ಮೆಟ್ಟಿ ಮಣ್ಣನು ಬೇರಲೂರಿ ನಿಂತಿಹಳು;
ಬಿಟ್ಟುಡುಗೆಗಳನೆಲ್ಲ ಕೊಟ್ಟು ಕೊಳ್ಳುವ ತೆರದಿ 
ಕೊಟ್ಟಿಗೆಯ ತಳಹಾಸಲಿಟ್ಟವಳು ಯಾರು?

ಹಸಿರು ಹುಲ್ಲನು ಮೆಂದು ಬೆಸಲಾಗಿ ತಾ ನಿಂದು
ಉಸಿರ ಕಂದಗೆ ಹಾಲನುಣಿಸಿ ಉಳಿಸಿಹಳು;
ಕಸವಿತ್ತ ಮನುಜರಿಗೆ ಬಸಿದು ಅಮೃತವನಿತ್ತು
ಹೆಸರು ಬಯಸದ ಮುಗುದೆಯಿವಳಾರು ಹೇಳು?

ಡಿ.ನಂಜುಂಡ
29/11/2013

ಬುಧವಾರ, ನವೆಂಬರ್ 27, 2013

ನಿತ್ಯಹರಿದ್ವರ್ಣ ಮಂದಿರ!



ತ್ರಿಭುವನಸುಂದರ! ಅತಿಶಯಬಂಧುರ!
ನಿತ್ಯಹರಿದ್ವರ್ಣ ಮಂದಿರ.
ವನಚರಚಾಲಿತ ತರಗೆಲೆಯಿಂಚರ;
ಸರಸರ ಸ್ವರತರ ಗಾಂಧಾರ.

ಶ್ರುತಿಹಿತಮಧುಕರಝೇಂಕಾರ;
ಶ್ರೀಶಿವಶಂಕರಿಸಂಚಾರ;
ಹಿಮಮಣಿಭೂಷಿತ ಸುಮರಸಸೇವಿತ
ದೇವಿಯ ಸುಂದರ ಅವತಾರ.
           
ಗಿರಿತಲನದಿಜಲಚಲನೆಯ ನಿಸ್ವನ;
ಜಲಚರಪಥದಲಿ ಅನುರಣನ.
ಧಾರಾವೃಷ್ಟಿಯ ತಟತಟ ತಾಳಕೆ
ನವಿಲಿನ ನರ್ತನಸಂಚಲನ.

ಧರಣೀಮಂಡಲದುದ್ಯಾನ;
ಆಹಾ! ಸುರಲೋಕಸಮಾನ!
ಅನುದಿನ ನಸುಕಿನ ವನಕವಿಗೋಷ್ಠಿಗೆ
ಪಂಚಮಸ್ವರದಲಿ ಪಿಕಗಾನ.

ಕುಸುಮಿತ ಗಿಡಗಳ ಚಿಗುರಲಿ ನವಶರ;
ಪ್ರಸವಿತ ತರುವಿಗೆ ತನುಭಾರ.
ನಾನಾಲತೆಗಳ ಮಂಟಪಮಧ್ಯದಿ
ಪತಂಗಯುಗಲದ ಶೃಂಗಾರ.

ರತಿಮನ್ಮಥಮಿಲನೋದ್ಗಾರ;
ಹರ್ಷೋತ್ಸವಕಾರ್ಯಾಗಾರ;
ಪುಲಕಿತಭೂರಮೆಯುದರದಿ ಅರ್ಪಿತ
ನವಬೀಜಾಂಕುರದುಪಚಾರ.

ಛಂದೋಮಯದಾ ಸೃಷ್ಟಿನಿಬಂಧದಿ
ಜೀವಾತ್ಮಗೆ ಸಾಕ್ಷಾತ್ಕಾರ.
ಸಂಚಿತ ಪುಣ್ಯವಿಪಾಕಕೆ ಫಲವಿದು
ಬ್ರಹ್ಮಾನಂದಾಮೃತಸಾರ.  

ಡಿ.ನಂಜುಂಡ
27/11/2013


ಸೋಮವಾರ, ನವೆಂಬರ್ 25, 2013

ವೀಣೆಯೊಳು ಅನುರಣಿಸಿ ಹರಿವು ಬರಲೆದೆಗೆ



ವೀಣೆಯೊಳು ಅನುರಣಿಸಿ ಹರಿವು ಬರಲೆದೆಗೆ;
ಕನ್ನಡಾಂಬೆಯ ಚರಣಸಂಚಲಿತ ದನಿಗೆ.

ಮನವಿರಿಸಿ ಉಸಿರಿನಲಿ ಲಯವಿರಿಸಿ ಹೃದಯದಲಿ
ಕಣಕಣದ ಕಂಪನಕೆ ಪದಗಳನು ಹೆಣೆದು;
ಮೌನದುದರದ ಒಳಗೆ ಭಾವಬಿಂಬವು ಚಲಿಸಿ
ಜನಿಸುತಿರೆ ಮುದ್ದಾದ ಒಲವಿನಾ ಕವಿತೆ.

ಪಂಚಪ್ರಾಣಗಳೆಲ್ಲ ಮಥಿಸಿ ಮಾತಿನ ಮಿತಿಗೆ
ಪಂಚಮಾತ್ರಾಗತಿಯ ರಿಂಗಣಕೆ ಕುಣಿದು;
ಪಂಚಭೂತಗಳೆಲ್ಲ ಹೂಂಕರಿಸಿ ದನಿಯೊಳಗೆ
ಸಂಚರಿಸಿ ಹೊಮ್ಮುತಿರೆ ಚೆಲುವಿನಾ ಕವಿತೆ.    

ಆನನದ ವಿಕಸನವು ಧ್ಯಾನದಲಿ ತಾ ನಿಂತು 
ಜೇನ ಹನಿಗಳು ಜಿನುಗಿ ರಸನದಲಿ ಬೆರೆತು;
ಗಾನಮಯ ಕೋಶದಲಿ ಅಕ್ಷರಗಳಂಕುರಿಸಿ
ಅನವರತ ಚಿಮ್ಮುತಿರೆ ನವರಸದ ಕವಿತೆ.

ಚಲಿತ ಮತಿಯಲಿ ಗಿರಿಜೆ ಚಲನಮೂಲದಿ ಶಿವನು
ಕಾಲತಾಳಕೆ ನಟಿಸಿ ನಲಿಯುತಿರೆ ಸತತ;
ಫಲಿತ ಸೃಷ್ಟಿಯ ಲಾಸ್ಯದಾನಂದಸಂಚಯಿಸಿ
ಸೊಲ್ಲು ಸೊಲ್ಲಲಿ ಕಲೆತು ನಿಲ್ಲುವುದು ಕವಿತೆ.

ಡಿ.ನಂಜುಂಡ
25/11/2013

ಗುರುವಾರ, ನವೆಂಬರ್ 21, 2013

ಅಂಗಳದಿ ಅರಳಿ ನಿಂತ ಒಲವ ಮಲ್ಲಿಗೆ!



ಕೇಳು ಬಾ ಓ ಗೆಳೆಯ! ಹಾಡುತಿರೆ ಹೃದಯ;
ಏಳು ಬಣ್ಣಗಳೂಡಿ ಬಿಳಿಯಾದ ಬಗೆಯ.

ಎಳೆಯ ರವಿಕಿರಣಗಳು ಇಳೆಗಿಳಿದ ನಸುಕಿನಲಿ
ಮೊಲ್ಲೆಹೂಬಳ್ಳಿಯಲಿ ಅರಳುತಿರೆ ಮುಗುಳು.
ತಳುಕು ಬಳುಕಿನ ಮೈಯ ಕುಲುಕಿ ಕೊಂಕಿಸಿ ಒಮ್ಮೆ
ಬೇಲಿಗಿಡಗಳ ಬಳಸಿ ಹಬ್ಬುತಿದೆ ಚೆಲುವು.

ನೀಲಗಗನದಿ ಹೊಳೆವ ಬೆಳ್ಳಿಚುಕ್ಕೆಯ ಬೆಡಗು
ನಳನಳಿಪ ಹೂಗಳಲಿ ಮೈದುಂಬಿದಂತೆ.
ಗೆಲುವು ಚಿಮ್ಮುತ ಚಿಗುರಿ ಗೆಲ್ಲುಗೆಲ್ಲಲಿ ಬಾಗಿ
ನಲಿವಾಗಿ ನಿಂತಂತೆ ತಬ್ಬಿರಲು ತರುವ.

ಬಾಳಿನಂಗಳದಲ್ಲಿ ನಲ್ಲೆಯಾ ಮೊಗವರಳಿ
ಒಲವು ತುಂಬಿದ ಹಾಗೆ ಎದೆಯೊಳಗ ಭಾವ.
ಕಲ್ಲೆದೆಯ ಹಂದರದಿ ಪಲ್ಲವಿಸಿ ಪ್ರೇಮಲತೆ
ಗಲ್ಲದಾ ಕುಳಿಯೊಳಗೆ ಹೊತ್ತಂತೆ ಹೂವ.

ಡಿ.ನಂಜುಂಡ
21/11/2013

ಶನಿವಾರ, ನವೆಂಬರ್ 16, 2013

ಕವಿಯುಲಿಗೆ ಕಾವಿಟ್ಟ ದಿವ್ಯಪಕ್ಷಿ



ಕರಿಯ ಸುಂದರ ಕಾಗೆ! ಯಾರಿಲ್ಲ ನಿನ ಹಾಗೆ
ಗುರುವಂತೆ ಅನುದಿನವು ಅರಿವನೆರೆವೆ.
ಮರಮರವ ಸಿಂಗರಿಪ ಪರಮಮಿತ್ರರ ಕೂಡಿ
ಹಾರುತಲಿ ಆರವದಿ ಬೆಳಕ ಕರೆವೆ.

ಆ ರವಿಯು ಕರಗಿಸಿದ ಪರಿತ್ಯಕ್ತ ವರ್ಣವನು
ಕರುಣೆಯಿಂದಲಿ ಹೀರಿ ನೀ ಧರಿಸುವೆ.
ಮರಣ ಹೊಂದಿದ ದೇಹ ನಾರುತಿರೆ ದಾರಿಯಲಿ
ಕರೆದು ಕುಲಬಾಂಧವರ ಸಂಸ್ಕರಿಸುವೆ.

ಗುಡಿಯ ಶಿಖರವೆ ಇರಲಿ ಗುಡಿಸಿಲಿನ ಸೂರಿರಲಿ
ಒಡಲೊಳಗೆ ಎರಡೆರಡು ಎಣಿಕೆಯಿಲ್ಲ;
ಅಡಿಯಿಡುತ ಎಲ್ಲೆಲ್ಲೂ ನೋಡಿ ಸಮದೃಷ್ಟಿಯಲಿ
ಬಡವ ಬಲ್ಲಿದರೆಂಬ ಭೇದ ತೊರೆವೆ.

ಕವಿಯುಲಿಗೆ ಕಾವಿಟ್ಟ ದಿವ್ಯಪಕ್ಷಿಯು ನೀನು
ಭವದೊಳಗೆ ನಿನಗಿಂತ ಭವ್ಯರಿಲ್ಲ.
ಸಾವನಪ್ಪಿದ ಜನರು ಭಾವರೂಪವ ತಳೆದು
ಅವತರಿಸಿ ನಿನ್ನೊಳಗೆ ನಿಲುವರೆಲ್ಲ!

ಡಿ.ನಂಜುಂಡ
16/11/13