ಸೋಮವಾರ, ನವೆಂಬರ್ 25, 2013

ವೀಣೆಯೊಳು ಅನುರಣಿಸಿ ಹರಿವು ಬರಲೆದೆಗೆ



ವೀಣೆಯೊಳು ಅನುರಣಿಸಿ ಹರಿವು ಬರಲೆದೆಗೆ;
ಕನ್ನಡಾಂಬೆಯ ಚರಣಸಂಚಲಿತ ದನಿಗೆ.

ಮನವಿರಿಸಿ ಉಸಿರಿನಲಿ ಲಯವಿರಿಸಿ ಹೃದಯದಲಿ
ಕಣಕಣದ ಕಂಪನಕೆ ಪದಗಳನು ಹೆಣೆದು;
ಮೌನದುದರದ ಒಳಗೆ ಭಾವಬಿಂಬವು ಚಲಿಸಿ
ಜನಿಸುತಿರೆ ಮುದ್ದಾದ ಒಲವಿನಾ ಕವಿತೆ.

ಪಂಚಪ್ರಾಣಗಳೆಲ್ಲ ಮಥಿಸಿ ಮಾತಿನ ಮಿತಿಗೆ
ಪಂಚಮಾತ್ರಾಗತಿಯ ರಿಂಗಣಕೆ ಕುಣಿದು;
ಪಂಚಭೂತಗಳೆಲ್ಲ ಹೂಂಕರಿಸಿ ದನಿಯೊಳಗೆ
ಸಂಚರಿಸಿ ಹೊಮ್ಮುತಿರೆ ಚೆಲುವಿನಾ ಕವಿತೆ.    

ಆನನದ ವಿಕಸನವು ಧ್ಯಾನದಲಿ ತಾ ನಿಂತು 
ಜೇನ ಹನಿಗಳು ಜಿನುಗಿ ರಸನದಲಿ ಬೆರೆತು;
ಗಾನಮಯ ಕೋಶದಲಿ ಅಕ್ಷರಗಳಂಕುರಿಸಿ
ಅನವರತ ಚಿಮ್ಮುತಿರೆ ನವರಸದ ಕವಿತೆ.

ಚಲಿತ ಮತಿಯಲಿ ಗಿರಿಜೆ ಚಲನಮೂಲದಿ ಶಿವನು
ಕಾಲತಾಳಕೆ ನಟಿಸಿ ನಲಿಯುತಿರೆ ಸತತ;
ಫಲಿತ ಸೃಷ್ಟಿಯ ಲಾಸ್ಯದಾನಂದಸಂಚಯಿಸಿ
ಸೊಲ್ಲು ಸೊಲ್ಲಲಿ ಕಲೆತು ನಿಲ್ಲುವುದು ಕವಿತೆ.

ಡಿ.ನಂಜುಂಡ
25/11/2013

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ