ಚಿಣ್ಣರ
ಗೆಜ್ಜೆಯ ನಾದವನಾಲಿಸಿ
ಕಲ್ಲರಳಿರೆ
ಗುಡಿಗುಡಿಗಳಲಿ.
ತೊದಲಿನ
ಪಂಚಾಮೃತಸಿಂಚನದಲಿ
ಮಿಂದಿಹ
ದೇವನು ಹರುಷದಲಿ.
ಎದೆಗೊಂದೊದೆಯುತ
ಕರೆದಿರೆ ಕೂಟಕೆ
ಒಳಗಡೆಯಡಗಿದ
ಮಾಧವನ.
ಮೊಸರಿನ
ಗಡಿಗೆಯನೊಡೆಯುತ ಬರುವನು
ಬೆಣ್ಣೆಯ
ಚೆಂಡನು ತಿರುಗಿಸುತ.
ಕಲ್ಲೆದೆಯೊರಳಿಗೆ
ಕಟ್ಟಿದ ಕೃಷ್ಣನ
ಬಾಲರು
ಸ್ಪರ್ಶದಿ ಬಿಡಿಸುತಿರೆ.
ಸ್ವಾರ್ಥದ
ಕಣ್ಣಿಗೆ ಬಟ್ಟೆಯ ಬಿಗಿಯುತ
ಜಿಗಿವನು
ಹಿಡಿವವರಾಡಿಸುತ.
ಮನಸನು
ಬೆತ್ತಲೆಗೊಳಿಸಲಿ ಮುಗ್ಧರು
ಮೋಹದ
ಬಟ್ಟೆಯ ಬಿಚ್ಚುತಲಿ.
ಹೃದಯವ
ತೊಳೆಯಲಿ ಜೇನ್ಮಳೆಹನಿಗಳು
ನಿತ್ಯವು
'ಜೀವ'ನ ತೋಯಿಸಲಿ.
ಡಿ.ನಂಜುಂಡ
12/11/2013
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ