ಗುರುವಾರ, ನವೆಂಬರ್ 21, 2013

ಅಂಗಳದಿ ಅರಳಿ ನಿಂತ ಒಲವ ಮಲ್ಲಿಗೆ!ಕೇಳು ಬಾ ಓ ಗೆಳೆಯ! ಹಾಡುತಿರೆ ಹೃದಯ;
ಏಳು ಬಣ್ಣಗಳೂಡಿ ಬಿಳಿಯಾದ ಬಗೆಯ.

ಎಳೆಯ ರವಿಕಿರಣಗಳು ಇಳೆಗಿಳಿದ ನಸುಕಿನಲಿ
ಮೊಲ್ಲೆಹೂಬಳ್ಳಿಯಲಿ ಅರಳುತಿರೆ ಮುಗುಳು.
ತಳುಕು ಬಳುಕಿನ ಮೈಯ ಕುಲುಕಿ ಕೊಂಕಿಸಿ ಒಮ್ಮೆ
ಬೇಲಿಗಿಡಗಳ ಬಳಸಿ ಹಬ್ಬುತಿದೆ ಚೆಲುವು.

ನೀಲಗಗನದಿ ಹೊಳೆವ ಬೆಳ್ಳಿಚುಕ್ಕೆಯ ಬೆಡಗು
ನಳನಳಿಪ ಹೂಗಳಲಿ ಮೈದುಂಬಿದಂತೆ.
ಗೆಲುವು ಚಿಮ್ಮುತ ಚಿಗುರಿ ಗೆಲ್ಲುಗೆಲ್ಲಲಿ ಬಾಗಿ
ನಲಿವಾಗಿ ನಿಂತಂತೆ ತಬ್ಬಿರಲು ತರುವ.

ಬಾಳಿನಂಗಳದಲ್ಲಿ ನಲ್ಲೆಯಾ ಮೊಗವರಳಿ
ಒಲವು ತುಂಬಿದ ಹಾಗೆ ಎದೆಯೊಳಗ ಭಾವ.
ಕಲ್ಲೆದೆಯ ಹಂದರದಿ ಪಲ್ಲವಿಸಿ ಪ್ರೇಮಲತೆ
ಗಲ್ಲದಾ ಕುಳಿಯೊಳಗೆ ಹೊತ್ತಂತೆ ಹೂವ.

ಡಿ.ನಂಜುಂಡ
21/11/2013

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ