ಕರಿಯ
ಸುಂದರ ಕಾಗೆ! ಯಾರಿಲ್ಲ ನಿನ ಹಾಗೆ
ಗುರುವಂತೆ
ಅನುದಿನವು ಅರಿವನೆರೆವೆ.
ಮರಮರವ
ಸಿಂಗರಿಪ ಪರಮಮಿತ್ರರ ಕೂಡಿ
ಹಾರುತಲಿ
ಆರವದಿ ಬೆಳಕ ಕರೆವೆ.
ಆ ರವಿಯು
ಕರಗಿಸಿದ ಪರಿತ್ಯಕ್ತ ವರ್ಣವನು
ಕರುಣೆಯಿಂದಲಿ
ಹೀರಿ ನೀ ಧರಿಸುವೆ.
ಮರಣ ಹೊಂದಿದ
ದೇಹ ನಾರುತಿರೆ ದಾರಿಯಲಿ
ಕರೆದು
ಕುಲಬಾಂಧವರ ಸಂಸ್ಕರಿಸುವೆ.
ಗುಡಿಯ
ಶಿಖರವೆ ಇರಲಿ ಗುಡಿಸಿಲಿನ ಸೂರಿರಲಿ
ಒಡಲೊಳಗೆ
ಎರಡೆರಡು ಎಣಿಕೆಯಿಲ್ಲ;
ಅಡಿಯಿಡುತ
ಎಲ್ಲೆಲ್ಲೂ ನೋಡಿ ಸಮದೃಷ್ಟಿಯಲಿ
ಬಡವ ಬಲ್ಲಿದರೆಂಬ
ಭೇದ ತೊರೆವೆ.
ಕವಿಯುಲಿಗೆ
ಕಾವಿಟ್ಟ ದಿವ್ಯಪಕ್ಷಿಯು ನೀನು
ಭವದೊಳಗೆ
ನಿನಗಿಂತ ಭವ್ಯರಿಲ್ಲ.
ಸಾವನಪ್ಪಿದ
ಜನರು ಭಾವರೂಪವ ತಳೆದು
ಅವತರಿಸಿ
ನಿನ್ನೊಳಗೆ ನಿಲುವರೆಲ್ಲ!
ಡಿ.ನಂಜುಂಡ
16/11/13
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ