ತ್ರಿಭುವನಸುಂದರ! ಅತಿಶಯಬಂಧುರ!
ನಿತ್ಯಹರಿದ್ವರ್ಣ ಮಂದಿರ.
ವನಚರಚಾಲಿತ ತರಗೆಲೆಯಿಂಚರ;
ಸರಸರ ಸ್ವರತರ ಗಾಂಧಾರ.
ಶ್ರುತಿಹಿತಮಧುಕರಝೇಂಕಾರ;
ಶ್ರೀಶಿವಶಂಕರಿಸಂಚಾರ;
ಹಿಮಮಣಿಭೂಷಿತ ಸುಮರಸಸೇವಿತ
ದೇವಿಯ ಸುಂದರ ಅವತಾರ.
ಗಿರಿತಲನದಿಜಲಚಲನೆಯ ನಿಸ್ವನ;
ಜಲಚರಪಥದಲಿ ಅನುರಣನ.
ಧಾರಾವೃಷ್ಟಿಯ ತಟತಟ ತಾಳಕೆ
ನವಿಲಿನ ನರ್ತನಸಂಚಲನ.
ಧರಣೀಮಂಡಲದುದ್ಯಾನ;
ಆಹಾ! ಸುರಲೋಕಸಮಾನ!
ಅನುದಿನ ನಸುಕಿನ ವನಕವಿಗೋಷ್ಠಿಗೆ
ಪಂಚಮಸ್ವರದಲಿ ಪಿಕಗಾನ.
ಕುಸುಮಿತ ಗಿಡಗಳ ಚಿಗುರಲಿ ನವಶರ;
ಪ್ರಸವಿತ ತರುವಿಗೆ ತನುಭಾರ.
ನಾನಾಲತೆಗಳ ಮಂಟಪಮಧ್ಯದಿ
ಪತಂಗಯುಗಲದ ಶೃಂಗಾರ.
ರತಿಮನ್ಮಥಮಿಲನೋದ್ಗಾರ;
ಹರ್ಷೋತ್ಸವಕಾರ್ಯಾಗಾರ;
ಪುಲಕಿತಭೂರಮೆಯುದರದಿ ಅರ್ಪಿತ
ನವಬೀಜಾಂಕುರದುಪಚಾರ.
ಛಂದೋಮಯದಾ ಸೃಷ್ಟಿನಿಬಂಧದಿ
ಜೀವಾತ್ಮಗೆ ಸಾಕ್ಷಾತ್ಕಾರ.
ಸಂಚಿತ ಪುಣ್ಯವಿಪಾಕಕೆ ಫಲವಿದು
ಬ್ರಹ್ಮಾನಂದಾಮೃತಸಾರ.
ಡಿ.ನಂಜುಂಡ
27/11/2013
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ