ಗುರುವಾರ, ಜುಲೈ 31, 2014

ಕಾಗೆ!

ಕಾಗೆ! ಕಾಗೆ! ಮುದ್ದು ಕಾಗೆ!
ನೀನು ನೋಡಲೇಕೆ ಹೀಗೆ?
ಕತ್ತಲನ್ನು ನುಂಗಿ ನುಂಗಿ
ಕಪ್ಪು ಬಣ್ಣವಾಯಿತೇ?

ಕಾ’ ಎನ್ನುತ ಕೂಗುತಿರುವೆ
ಗೆಳೆಯರೊಡನೆ ಹಾರುತಿರುವೆ
ಸ್ನೇಹವನ್ನು ಹಂಚಿ ಹಂಚಿ
ಪಡೆಯು ದೊಡ್ಡದಾಯಿತೇ?

ಮನೆಯ ಮೇಲೆ ಕುಳಿತುಕೊಳುವೆ
ಸುತ್ತ ಮುತ್ತ ನೋಡುತಿರುವೆ
ಬಾಗಿಲೊಳಗೆ ದಾಟಿ ಬರಲು
ಹೆದರಿಕೆ ನಿನಗಾಯಿತೇ?

ಎಲ್ಲರೆಸೆದ ಕಸವ ತಿಂದು
ನೀನಾಗಿಹೆ ಜಗದ ಬಂಧು
ನಿನ್ನ ನೋಟವೆನಗೆ ದಿನದ
ಮೊದಲ ಪಾಠವಾಯಿತೇ?

ಡಿ.ನಂಜುಂಡ
31/07/2014






ಸೋಮವಾರ, ಜುಲೈ 28, 2014

ಮಮ ಜನನಿ

ಮಾಂ ಪಾಹಿ ಸದಾ ಶರ್ವಾಣಿ
ಜಗಜ್ಜನನಿ ಹೇ ಕಲ್ಯಾಣಿ
ಸಾಂಬಸದಾಶಿವಹೃದಯೋಲ್ಲಾಸಿನಿ
ಮಾಂ ಪಾಹಿ ಸದಾ ಮಮ ಜನನಿ

ಧವಲಹಿಮಾಲಯಮಾಲಾಧಾರಿಣಿ
ನವಾರುಣೋದಯ ಗಿರಿಸಂಚಾರಿಣಿ
ಜೀವನದೀಜಲಪಾತವಿಹಾರಿಣಿ
ಭವಾವತಾರಿಣಿ ಮಮ ಜನನಿ

ಪರ್ಣಾಲಂಕೃತ ವನತರುವಾಸಿನಿ
ವರ್ಣವಿಭೂಷಿಣಿ ಖೇಚರಭಾಷಿಣಿ
ಕರ್ಣರಸಾಯನ ಭಾಷಾದಾಯಿನಿ
ಸ್ವರ್ಣಕಿರೀಟಿಣಿ ಮಮ ಜನನಿ

ವೇದಸುಪೋಷಿಣಿ ನಾದತರಂಗಿಣಿ
ಸಾಧುಜನಮುಖೇ ನಿತ್ಯವಿಹಾರಿಣಿ
ಸತ್ಯವಿಮರ್ಶಿತ ಋಷಿಮತಿಚಾರಿಣಿ
ತತ್ತ್ವಪ್ರಕಾಶಿನಿ ಮಮ ಜನನಿ

ಡಿ.ನಂಜುಂಡ

28/07/2014

ಶುಕ್ರವಾರ, ಜುಲೈ 25, 2014

ಭಾವೈಕ್ಯ

ಉಚ್ಚರಿಸಿದಕ್ಷರದಿ ಸಂಚರಿಸು ಕ್ಷಣವೆ!
ಎಚ್ಚರವನೆಚ್ಚರಿಪ ಪದವಿರಿಸು, ಮನವೆ!

ಕಾಮಿಗಳು, ಕ್ರೋಧಿಗಳು, ಕಡು ಲೋಭಿಗಳೆ ಇರಲಿ
ಮೋಹಮದಮತ್ಸರಗಳವತಾರವೆತ್ತಿರಲಿ
ಭವರೋಗಭೋಗಾದಿ ಭಂಡಾರಖಣಿಯಿರಲಿ
ಸುಖದುಃಖಸಾಗರದೊಳೇರಿಳಿತÀದಲೆಯಿರಲಿ

ಸಂಘಟನಚತುರಾತ್ಮಚೈತನಪದಕೆ;
ನೈವೇದ್ಯದಂತೆಲ್ಲವನÀರ್ಪಿಸುತಿರದಕೆ.

ಶರಣಾಗಿ ಹಗುರಾಗಿ ನೀ ಜಗದಗಲವಾಗಿ
ಮೌನಘನದಾನಂದದೇಕರಸವಾಗಿ;
ಸೃಷ್ಟಿಕಾವ್ಯದ ವರ್ಣವೈವಿಧ್ಯತರುವಾಗಿ
ಹರಿದ್ವರ್ಣದುಸಿರಿನೊಳು ನೀನೈಕ್ಯವಾಗಿ;

ವಿಶ್ವಪ್ರಬಂಧದೊಳು ಅಕ್ಷರಗಳಂದದಲಿ
ಛಂದಃಪ್ರಾಸಗಳ ಗತಿಯು ನೀನಾಗು;
ನಿಯತದಲಿ ನೀ ಭ್ರಮಿಸಿ ಎಲ್ಲದರಲವತರಿಸಿ
ಹೃದಯದಲಿ ಒಂದಾಗಿ ಭಾವೈಕ್ಯವಾಗು.

ಡಿ.ನಂಜುಂಡ
25/07/2014




ಮಂಗಳವಾರ, ಜುಲೈ 22, 2014

ಬಾರೆ ಲಲಿತೆ!

ರಸನದೊಳಗೆ ಬಾರೆ ಲಲಿತೆ!
ಲಾಸ್ಯಪದಗಳಿರಿಸುತ
ಹೊಸ ಹರುಷವ ತಾರೆ ಸವಿತೆ!
ರಸಭಾವವ ಸ್ಫುರಿಸುತ

ಮಾತ ಮಥಿಸಿ ಬೆಣ್ಣೆಯಂಥ
ಮಿತಪದಗಳ ಕುಣಿಸುತ
ಋತದೊಳೆನ್ನ ಮತಿಯನಿರಿಸಿ
ಗತಿಯ ತೋರಿ ಹರಸುತ

ಬನದ ಚೆಲುವ, ಹೊನಲ ನಲಿವ
ಮನದಲೆಯಲಿ ತೇಲಿಸಿ
ಮೌನದಗಲ ರಿಂಗಣವನು
ಕಣಕಣಗಳಲೂಡಿಸಿ

ಬಿಂದುಮೂಲದಕ್ಷರವನು
ಬಾನ್ದನಿಯಲಿ ಬಾಗಿಸಿ
ಸೌಂದರ್ಯಸಮಾಧಿಯೊಳು
ಬಂಧಮುಕ್ತವಾಗಿಸಿ

ಪ್ರತಿಯುಸಿರಿನ ತಾಳಗತಿಗೆ
ಪ್ರತಿಪದಗಳಲಾಡುತ
ಪ್ರತಿಬಿಂಬಿತ ಕಾವ್ಯಗಳಲಿ
ಪ್ರತಿರೂಪವ ತಾಳುತ

ಬಾರೆ ಪ್ರಕೃತಿಮಾತೆ! ಲಲಿತೆ!
ಆರು ಕಮಲವರಳಿಸಿ
ತಾರೆ ವರ್ಣವರ್ಣಗಳನು
ಸಾರಪೂರ್ಣವಾಗಿಸಿ.

ಡಿ.ನಂಜುಂಡ
22/07/2014


ಸೋಮವಾರ, ಜುಲೈ 21, 2014

ಬಾನ್ದನಿ

ನಾನಿಲ್ಲದಿದ್ದರೂ ಬಾನಿಹುದು ನೋಡ
ತಾನನದ ದನಿಯಿಹುದು ಎಲ್ಲೆಲ್ಲೂ ಕೇಳ

ನಾಳೆಗಳ ಎಣಿಕೆಯಲಿ ಕ್ಷಣವ ಮರೆತರೂ
ಕಾಲತಾಳಕೆ ಮಳೆಯು ಸುರಿಯುವಂತೆ
ಜಲಮೂಲಗಳಿಗೆಲ್ಲ ವಿಷವುಣಿಸುತಿದ್ದರೂ
ಇಳೆಯೆಡೆಗೆ ನೀರದನು ಜಾರುವಂತೆ

ತಾರೆಗಳ ತೋಟಕ್ಕೆ ಮೇರೆಯಿಲ್ಲವಾದರೂ
ಯಾರೋ ಎಲ್ಲವನೂ ಕಾಯುವಂತೆ
ರವಿಯ ಕಿರಣಗಳು ಸರಿಗಮದ ನಡೆಯಲ್ಲಿ
ಸ್ವರದ ಭಾವಕೆ ಬಳುಕಿ ಬಾಗುವಂತೆ

ಇದೆ ನೋಡು ಜಗವು ಲಯಬದ್ಧ ಹಾಡಂತೆ
ಪದವೊಂದು ಅಂಕುರಿಸಿ ಬೆಳೆದು ಬೆಳೆದು  
ಎದೆಯುಸಿರ ತಾ ತುಳಿದು ಬಾನಗಲ ಸಂಚರಿಸಿ
ನಾದದಲೆಯಲಿ ತೇಲಿ ನಲಿಯುತಿಹುದು

ಡಿ.ನಂಜುಂಡ
21/07/2014



ಭಾನುವಾರ, ಜುಲೈ 20, 2014

ಮಸಾಲೆ ಪೂರಿ!

ಮನೆಮನೆ ಬಚ್ಚಲ ರೊಚ್ಚದು ನಿಂತಿರೆ
ಚರಂಡಿಯೊಳಗಿನ ಹೊಂಡದಲಿ
ಡಬ್ಬದ ತಗಡುಗಳಂದದ ಗಾಡಿಯು
ನಿಂತಿರಲದರಾ ಪಕ್ಕದಲಿ

ಮಸಾಲೆಪೂರಿಯ ಸಾರವಿದೆ
ರೊಚ್ಚಿನ ತೀಕ್ಷ್ಣತೆಯಳಿಯುತಿದೆ

ದೇವರಗುಡಿಗೋಪುರದಡಿಯಲಿ
ಸಂಜೆಯ ಘಂಟಾನಾದವಿರೆ
ಅರ್ಚನೆಗೈದಿಹ ಭಕ್ತರ ಕಂಗಳು
ಅತ್ತಿತ್ತಲುಗುತಲೋಡುತಿರೆ

ಗಲ್ಲಿಯೊಳÀಲೆಯುತಲಲ್ಲಲ್ಲೇನಿವೆ
ಎಲ್ಲವನರಿಯುವ ಆಸೆಯಿರೆ
ಪೂರಿಗಳಾರನು ತಟ್ಟೆಯೊಳಿಟ್ಟು
ಮುರಿಯುವ ಸದ್ದದು ಕೇಳುತಿರೆ

ಕಿವಿಗಳು ಮೊರದಂತಾಗುವುವು
ಮೂಗಿನ ಹೊಳ್ಳೆಗಳರಳುವುವು
ಪಂಚೇಂದ್ರಿಯಗಳು ನಾಲಗೆಯಂಚಲಿ
ಒಗ್ಗಟ್ಟಿನ ಸಭೆ ಸೇರುವುವು

ಮಸಾಲೆಪೂರಿಯ ತಿನ್ನುವ ಕ್ಷಣದಾ-
ನಂದದ ಕ್ಷಣಗಳನೆಣಿಸುತಲಿ
ಬಾಳಲಿ ಬಂದಿಹ ಬವಣೆಗಳೆಲ್ಲವ-
ನೊಮ್ಮೆಲೆ ಹೊರಗೊಗೆಯುತಲಿ

ಕಾಲ್ಗಳು ಸರಸರವೋಡುವುವು
ಗಾಡಿಯ ಸನಿಹವ ತಲುಪುವುವು

ಬಿಸಿಯ ಮಸಾಲೆಯ ದ್ರಾವಣದಲ್ಲಾ
ಪೂರಿಗಳೊಳಮೈ ತುಂಬುತಿರೆ
ಚಾಚಿದ ಕರಗಳ ಸರದಿಯನೆಣಿಸುತ
ತಗೊಳ್ಳಿ ಎಂಬಾಹ್ವಾನವಿರೆ

ಸ್ವರ್ಗದ ಬಾಗಿಲು ತೆರೆದಂತೆ
ಪಾಪದ ಲೆಕ್ಕಗಳಳಿದಂತೆ

ಬಚ್ಚಲ ರೊಚ್ಚಿನ ವಾಸನೆಯೊಂದಿಗೆ
ಪಾನಿಯ ಘಮಘಮವೂಡಿರಲು
ಸುಖದುಃಖಗಳಲಿ ಸಮತೆಯ ಸಾರುವ
ಕೆಚ್ಚೆದೆಯಂಗಡಿಯಲ್ಲಿರಲು

ಮಕ್ಕಳು, ಮುದುಕರು, ಯುವಕರ ಗುಂಪಲಿ
ನಾರೀಮಣಿಗಳು ಕೂಡಿರಲು
ಬನ್ನಿರಿ, ತಿನ್ನಿರಿ ಮಸಾಲೆಪೂರಿಯ
ಎನ್ನುವುದೊಂದೇ ಕೂಗಿರಲು

ದೈವವು ಮಾಯಾಜಾಲವ ಹೆಣೆದಿದೆ
ಪೂರೀವಾಲನ ನೇಮಿಸಿದೆ
ಲೀಲಾಜಾಲದೊಳೆಲ್ಲರ ಮನಗಳ
ಸೆಳೆಯುತ ಕುಣಿಸುತಲಾಡಿಸಿದೆ
ಎಲ್ಲರನೊಂದೆಡೆಗೂಡಿಸಿದೆ.

ಡಿ.ನಂಜುಂಡ

20/07/2014