ಮಂಗಳವಾರ, ಜುಲೈ 22, 2014

ಬಾರೆ ಲಲಿತೆ!

ರಸನದೊಳಗೆ ಬಾರೆ ಲಲಿತೆ!
ಲಾಸ್ಯಪದಗಳಿರಿಸುತ
ಹೊಸ ಹರುಷವ ತಾರೆ ಸವಿತೆ!
ರಸಭಾವವ ಸ್ಫುರಿಸುತ

ಮಾತ ಮಥಿಸಿ ಬೆಣ್ಣೆಯಂಥ
ಮಿತಪದಗಳ ಕುಣಿಸುತ
ಋತದೊಳೆನ್ನ ಮತಿಯನಿರಿಸಿ
ಗತಿಯ ತೋರಿ ಹರಸುತ

ಬನದ ಚೆಲುವ, ಹೊನಲ ನಲಿವ
ಮನದಲೆಯಲಿ ತೇಲಿಸಿ
ಮೌನದಗಲ ರಿಂಗಣವನು
ಕಣಕಣಗಳಲೂಡಿಸಿ

ಬಿಂದುಮೂಲದಕ್ಷರವನು
ಬಾನ್ದನಿಯಲಿ ಬಾಗಿಸಿ
ಸೌಂದರ್ಯಸಮಾಧಿಯೊಳು
ಬಂಧಮುಕ್ತವಾಗಿಸಿ

ಪ್ರತಿಯುಸಿರಿನ ತಾಳಗತಿಗೆ
ಪ್ರತಿಪದಗಳಲಾಡುತ
ಪ್ರತಿಬಿಂಬಿತ ಕಾವ್ಯಗಳಲಿ
ಪ್ರತಿರೂಪವ ತಾಳುತ

ಬಾರೆ ಪ್ರಕೃತಿಮಾತೆ! ಲಲಿತೆ!
ಆರು ಕಮಲವರಳಿಸಿ
ತಾರೆ ವರ್ಣವರ್ಣಗಳನು
ಸಾರಪೂರ್ಣವಾಗಿಸಿ.

ಡಿ.ನಂಜುಂಡ
22/07/2014


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ