ಭಾನುವಾರ, ಜುಲೈ 6, 2014

ಮನಕೊಂದು ಮಾತು!

ಎಲೆ ಮನವೆ! ಬಾ ಇಲ್ಲಿ, ಕುಳಿತುಕೊ ಸನಿಹದಲಿ
ಆಲಿಸೆನ್ನಯ ಮಾತ ಒಮ್ಮೆ ಓಗೊಟ್ಟು
ನೆಲದಿ ನಿಲ್ಲದೆ ನೆಗೆದು ನೀಲದಾಗಸಕೇರಿ
ಅಲೆಯದಿರು ಅತಿಯಾದ ಆಸೆಗಳನಿಟ್ಟು

ಕಾಲನಿಯಮವ ಮೀರಿ ತೇಲಿ ಹೋಗದ ಹಾಗೆ
ತಾಳಗತಿಯಲಿ ಚಲಿಸಿ ಉಸಿರಲೊಂದಾಗು
ಬಾಲಭಾವದÀ ಚೆಲುವ ನಗುವ ಮೊಗಕೈತಂದು
ಹಾಲನೆರೆಯುತ ಹೃದಯ-ಶಿವನ ಶಶಿಯಾಗು 

ಅವಸಾನಭಯಭೀತಿಯಾತಂಕದವರಸರವ
ಅವಧಾನಿಯಾಗುತಲಿ ಕ್ಷಣದೊಳಗೆ ತ್ಯಜಿಸು
ಭವದೊಳೆದ್ದಿಹ ಭವ್ಯ ಭಾವಪ್ರಪಂಚದೊಳು
ಅವಧೂತನಂತಾಗಿ ಎಲ್ಲವನನುಭವಿಸು

ಪಂಚಭೂತಾತ್ಮತನುಭಾವದತಿರೇಕಗಳ
ಪಂಚಾಗ್ನಿಕುಂಡದಲಿ ಹವಿಯಂತೆ ಸುರಿಸು
ಪಂಚಕರಣಗಳಲ್ಲಿ ಪಂಚಾನನಪ್ರೀತ
ಪಂಚಾಕ್ಷರೀ ಮಂತ್ರದುಚ್ಚಾರವಿರಿಸು.
ಡಿ.ನಂಜುಂಡ
06/07/2014


2 ಕಾಮೆಂಟ್‌ಗಳು:

  1. ನಮ್ಮ ಮನವನ್ನು ನಾವೇ ಹೇಗೆ ತಹಬಂದಿಗೆ ತಂದುಕೊಳ್ಳುವುದು ಎನ್ನುವುದಕ್ಕೆ ಒಂದು ಒಳ್ಳೆಯ ಮಾರ್ಗವನ್ನು ತೋರುವ ಕವಿತೆ. ಧನ್ಯವಾದಗಳು ಭಟ್ಟರೇ

    ಪ್ರತ್ಯುತ್ತರಅಳಿಸಿ